ನವದೆಹಲಿ, ಸೆ 20 (DaijiworldNews/DB): ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಡಿ ವಿಚಾರಣೆಗೆ ಹಾಜರಾಗುವ ವೇಳೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಘಟನೆ ನಡೆದಿದೆ.
ಡಿ.ಕೆ. ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿತ್ತು. ಹೀಗಾಗಿ ದೆಹಲಿಯ ವಿದ್ಯುತ್ ಲೇನ್ನಲ್ಲಿರುವ ಇಡಿ ಕಚೇರಿಗೆ ವಿಚಾರಣೆಗಾಗಿ ಅವರು ಆಗಮಿಸಿದ್ದರು. ಈ ವೇಳೆ ಏಕಾಏಕಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ನೆರವು ಕೋರಿದರು. ವಿಚಾರಣೆಗೆ ತೆರಳುವ ವೇಳೆ ಡಿಕೆಶಿವರೊಂದಿಗೆ ಅವರ ಸಂಬಂಧಿಯೂ ಆಗಿರುವ ಕುಣಿಗಲ್ ಶಾಸಕ ಡಾ.ರಂಗನಾಥ್ ಇದ್ದರು.
ಸದ್ಯ ಭಾರತ್ ಜೋಡೊ ಯಾತ್ರೆಗಾಗಿ ತಯಾರಿ ನಡೆಸುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಇಡಿ ವಿಚಾರಣೆಗೆ ಹಾಜರಾಗಲು ತಿಳಿಸಿದೆ. ವಿಧಾನಸಭೆ ಚುನಾವಣೆ ಸನಿಹದಲ್ಲಿದ್ದು, ಇದೇ ವೇಳೆ ಇಡಿ ಡಿಕೆಶಿಯವರಿಗೆ ಸಮನ್ಸ್ ನೀಡಿದೆ.
ಡಿ.ಕೆ. ಶಿವಕುಮಾರ್ ಅವರನ್ನು ಈ ಹಿಂದೆಯೂ ಇಡಿ ವಿಚಾರಣೆಗೊಳಪಡಿಸಿದ್ದು, ಆ ವಿಚಾರಣೆಯ ಬಳಿಕ ವಿಶೇಷ ನ್ಯಾಯಾಲಯಕ್ಕೆ ಇಡಿ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಇದರ ನಡುವೆ ರೆಗ್ಯುಲರ್ ಬೇಲ್ನ್ನು ಕೂಡಾ ಡಿಕೆಶಿ ಪಡೆದುಕೊಂಡಿದ್ದಾರೆ. ಇದೀಗ ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದ ಪ್ರತಿಕ್ರಿಯೆ ನೀಡಿರುವ ಸಂಸದ ಡಿ.ಕೆ. ಸುರೇಶ್, ಡಿಕೆಶಿ ಕುಟುಂಬದ ಎಲ್ಲಾ ಮಾಹಿತಿ, ಸಂಪೂರ್ಣ ಆಸ್ತಿ ವಿವರಗಳನ್ನು ಕಳೆದ ಎರಡು ವರ್ಷಗಳ ಹಿಂದೆಯೇ ನೀಡಲಾಗಿದೆ. ಆದರೆ ಪದೇ ಪದೇ ವಿಚಾರಣೆಗೆ ಕರೆಯುತ್ತಿರುವುದು ಮತ್ತು ದೂರು ದಾಖಲಿಸಿರುವುದು ರಾಜಕೀಯ ಪ್ರಚೋದನೆಯಿಂದಲೇ ಆಗಿದೆ. ಕಾಂಗ್ರೆಸ್ ನಾಯಕರನ್ನು ಹೆದರಿಸುವ ಅವರ ತಂತ್ರ ಫಲಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.