ಬೆಂಗಳೂರು, ಸೆ 19 (DaijiworldNews/SM): ಪ್ರಸಕ್ತ ಸಾಲಿನಲ್ಲೇ ನೈತಿಕ ಶಿಕ್ಷಣ ಜಾರಿಗೊಳಿಸಲು ಸರಕಾರ ಉದ್ದೇಶಿಸಿದ್ದು, ಇದರಲ್ಲಿ ಭಗವದ್ಗೀತೆಯ ಅಂಶಗಳೂ ಇರಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಸೋಮವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನೈತಿಕ ಶಿಕ್ಷಣದಲ್ಲಿ ಏನೇನು ಇರಬೇಕು ಎಂಬುದರ ಬಗ್ಗೆ ತಜ್ಞರ ಸಮಿತಿ ಶಿಫಾರಸು ಮಾಡಲಿದೆ ಎಂದು ಹೇಳಿದರು.
ಲಿಖೀತ ಉತ್ತರದಲ್ಲಿ, ಪ್ರಸ್ತುತ ಶಾಲಾ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಪ್ರತ್ಯೇಕವಾಗಿ ಬೋಧಿಸುವ ವಿಚಾರ ಸರಕಾರದ ಮುಂದಿಲ್ಲ ಎಂದು ಹೇಳಲಾಗಿದೆ. ಹಾಗಿದ್ದರೆ ಭಗವದ್ಗೀತೆ ಕಲಿಸುವುದಾಗಿ ಹೇಳಲು ಮುಜುಗರವೇ ಎಂದು ಪ್ರಾಣೇಶ್ ಖಾರವಾಗಿ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವರು, ಪ್ರಸಕ್ತ ಸಾಲಿನಲ್ಲಿ ಪ್ರತ್ಯೇಕವಾಗಿ ಬೋಧಿಸುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಇದರಲ್ಲಿ ಮುಜುಗರದ ಪ್ರಶ್ನೆಯೇ ಇಲ್ಲ ಎಂದರು.