ಬೆಂಗಳೂರು, ಸೆ 19 (DaijiworldNews/HR): ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಮಹಾನಗರದ ಮೂಲ ಸೌಕರ್ಯಗಳಿಗೆ ಅಡ್ಡಿಪಡಿಸಿದ್ದೇನೆ ಎಂಬ ಬಗ್ಗೆ ಒಂದು ಪ್ರಕರಣವನ್ನು ತೋರಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಎಸ್ ಟಿ ಸೋಮಶೇಖರ್ ರಾಜೀನಾಮೆ ಕೊಡುವುದು ಸೂಕ್ತ ಎಂದು ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಚಿವ ಎಸ್.ಟಿ.ಸೋಮಶೇಖರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳಿತು. ಬಿಡಿಎ ವಸತಿ ಯೋಜನೆಯಿಂದಕ್ಕೆ ಸಂಬಂಧಿಸಿ ಲಂಚದ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸಚಿವರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಅಲ್ಲದೆ ಇದರ ತನಿಖೆಗೆ ಹೈಕೋರ್ಟ್ ಸೂಚನೆ ಕೊಟ್ಟಿದೆ. ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದರು.
ಇನ್ನು ಜೆಡಿಎಸ್ ಕಾಲದಲ್ಲಿ ಆಗಿರುವ ನಿರ್ಧಾರಗಳಿಂದ ಲೋಪ ಆಗಿದೆ ಎಂದು ಕೆಲವರು ಆರೋಪ ಮಾಡಿದ್ದು, ನಾನು ಅಧಿಕಾರದಲ್ಲಿ ಇದ್ದಾಗ ಏನಾದರೂ ಲೋಪ ಆಗಿದ್ದರೆ, ಆರೋಪ ಮಾಡಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದಿದ್ದಾರೆ.