ಪಂಜಾಬ್, ಸೆ 19 (DaijiworldNews/MS): ಮೊಹಾಲಿಯ ಖಾಸಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪ್ರಕರಣದ ಸಂಬಂಧ ಹಿಮಾಚಲ ಪ್ರದೇಶ ಪೊಲೀಸರು ಶಿಮ್ಲಾದಲ್ಲಿ ರೋಹ್ರು ಮೂಲದ 23 ವರ್ಷದ ಯುವಕನನ್ನು ಬಂಧಿಸಿದ್ದು ಭಾನುವಾರ ಸಂಜೆ ಪಂಜಾಬ್ ಪೊಲೀಸ್ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಪ್ರಕರಣದಲ್ಲಿ ಬೇಕಾಗಿರುವ ಯುವಕನನ್ನು ಬಂಧಿಸುವಂತೆ ಪಂಜಾಬ್ ಡಿಜಿಪಿ ಗೌರವ್ ಯಾದವ್ ಅವರಿಂದ ಮನವಿ ಸ್ವೀಕರಿಸಲಾಗಿತ್ತು ಎಂದು ಹಿಮಾಚಲ ಪ್ರದೇಶ ಡಿಜಿಪಿ ಸಂಜಯ್ ಕುಂದು ಹೇಳಿದ್ದಾರೆ. ಆರೋಪಿಯ ವಿವರಗಳನ್ನು ಸಂಗ್ರಹಿಸಿದ ನಂತರ, ಪೊಲೀಸ್ ತಂಡವು ಅಂತಿಮವಾಗಿ ಆರೋಪಿ ಯುವಕನನ್ನು ರೋಹ್ರುದಿಂದ ಬಂಧಿಸಿದೆ ಎಂದು ಡಿಸಿಪಿ ಸಂಜಯ್ ಕುಂದು ಹೇಳಿದ್ದಾರೆ.
ಬಂಧನದ ನಂತರ ಪೊಲೀಸರು ಯುವಕನನ್ನು ರೋಹ್ರು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಮೊಹಾಲಿಯಲ್ಲಿ ಎಫ್ಐಆರ್ ದಾಖಲಿಸಿ ಬಳಿಕ ಪ್ರಕರಣದ ತನಿಖೆ ನಡೆಸುತ್ತಿರುವ ಪಂಜಾಬ್ನ ಪೊಲೀಸ್ ತಂಡಕ್ಕೆ ಆರೋಪಿಯನ್ನು ಹಸ್ತಾಂತರಿಸಲಾಗಿದೆ.
ಐಪಿಸಿಯ ಸೆಕ್ಷನ್ 354 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 ಇ ಅಡಿಯಲ್ಲಿ ಬಂಧಿಸಲಾಗಿದೆ.ಇದೇ ಪ್ರಕರಣದಲ್ಲಿ ಶಿಮ್ಲಾದಿಂದ 31 ವರ್ಷದ ಯುವಕನನ್ನು ಪಂಜಾಬ್ ಪೊಲೀಸರು ಪರಿಶೀಲನೆಗಾಗಿ ವಶಕ್ಕೆ ಪಡೆದಿದ್ದಾರೆ. ಇನ್ನು ಘಟನೆಗೆ ಕಾರಣವಾದ ವಿಡಿಯೋಗಳನ್ನು ಚಿತ್ರೀಕರಿಸಿದ ವಿದ್ಯಾರ್ಥಿನಿಯೂ ಶಿಮ್ಲಾ ಜಿಲ್ಲೆಯ ರೋಹ್ರುಗೆ ಸೇರಿದವಳಾಗಿದ್ದಾಳೆ.