ಬೆಂಗಳೂರು, ಸೆ 18 (DaijiworldNews/SM): ಬಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಹಿಂಪಡೆದಿಲ್ಲ. ಇನ್ನಷ್ಟು ಸರಳೀಕರಣ ಮಾಡಿ ಇದೇ ತಿಂಗಳಿನಿಂದ ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದ್ದಾರೆ.
ಇಂದು ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಸ್ಮಾ ದೇವಿ ಮಂದಿರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ 43ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿಸಿಲು, ಗಾಳಿ, ಮಳೆ ಎನ್ನದೇ ಬಹಳ ಕಠಿಣ ಪರಿಶ್ರಮದಿಂದ ದುಡಿಯುವುದು ಈ ಭೋವಿ ಸಮಾಜದ ಮೂಲ ಗುಣ. ಈ ಸಮಾಜದೊಂದಿಗೆ ನಮ್ಮದು 30 ವರ್ಷದ ಸಂಬಂಧವಿದೆ. ನಮ್ಮ ತಂದೆಯವರೊಂದಿಗೆ ಈ ಸಮಾಜ ಅನೋನ್ಯವಾಗಿತ್ತು. ಹುಬ್ಬಳ್ಳಿಯಲ್ಲಿ ಜಿ.ಎಸ್ ಬಿಳಗಿಯವರು, ಶಿವಮೊಗ್ಗದಲ್ಲಿ ಜಿ. ಬಸವಣ್ಣಪ್ಪ ಮಂತ್ರಿಯಾಗಿದ್ದರು. ಇವರು ನಮ್ಮ ತಂದೆಯವರೊಂದಿಗೆ ಅತ್ಯಂತ ನಿಕಟ ಒಡನಾಟ ಹೊಂದಿದ್ದರು ಎಂದು ಸ್ಮರಿಸಿದರು.