ಲಕ್ನೊ ಸೆ 18 (DaijiworldNews/DB): ಪತ್ನಿಯ ಶವವನ್ನು ಮಡಿಲಲ್ಲಿಟ್ಟುಕೊಂಡು ವ್ಯಕ್ತಿಯೊಬ್ಬ 500 ಕಿಲೋ ಮೀಟರ್ವರೆಗೆ ರೈಲಿನಲ್ಲಿ ಸಂಚರಿಸಿದ ಹೃದಯ ವಿದ್ರಾವಕ ಘಟನೆ ಬಿಹಾರದ ಔರಂಗಾಬಾದ್ನಲ್ಲಿ ನಡೆದಿದೆ.
ಔರಂಗಾಬಾದ್ ನಿವಾಸಿ ನವೀನ್ ಎಂಬವರು ಪತ್ನಿ ಊರ್ಮಿಳಾರನ್ನು ಚಿಕಿತ್ಸೆಗಾಗಿ ಲೂದಿಯಾನಕ್ಕೆ ರೈಲಿನಲ್ಲಿ ಕರೆದೊಯ್ದು ಬಳಿಕ ಮರಳಿ ಬಿಹಾರಕ್ಕೆ ಶುಕ್ರವಾರ ರಾತ್ರಿ ರೈಲು ಹತ್ತಿದ್ದಾರೆ. ಆದರೆ ರೈಲು ಹೊರಟ ಬಳಿಕ ಪತ್ನಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ರೈಲಿನಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ಪತ್ನಿ ಸಾವನ್ನಪ್ಪಿದ ದುಃಖ ಒಂದೆಡೆಯಾದರೆ, ತನ್ನನ್ನು ಅರ್ಧದಲ್ಲೇ ರೈಲಿನಿಂದ ಇಳಿಸಬಹುದು ಎಂಬ ಭಯ ಇನ್ನೊಂದೆಡೆ ಕಾಡಿ ಪತ್ನಿ ಸಾವನ್ನಪ್ಪಿರುವುದನ್ನು ಯಾರಿಗೂ ತಿಳಿಸದೆ ರೈಲಿನಲ್ಲಿ ನವೀನ್ 500 ಕಿಲೋ ಮೀಟರ್ವರೆಗೆ ಪ್ರಯಾಣಿಸಿದ್ದಾರೆ. ಇಷ್ಟೂ ಸುದೀರ್ಘ ಅವಧಿವರೆಗೆ ತಮ್ಮ ಮಡಿಲಲ್ಲೇ ಪತ್ನಿಯ ಶವವನ್ನು ಮಲಗಿಸಿಕೊಂಡು ಅವರು ಕ್ರಮಿಸಿದ್ದಾರೆ. ಆದರೆ ಈ ವೇಳೆ ಕೆಲ ಪ್ರಯಾಣಿಕರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಜಿಆರ್ಪಿಗೆ ವಿಷಯ ತಿಳಿಸಿದ್ದು, ಶಹಜಹಾನ್ಪುರ ತಲುಪಿದಾಗ ಅಧಿಕಾರಿಗಳು ಪರಿಶೀಲಿಸಿ ನವೀನ್ ಮತ್ತು ಅವರ ಪತ್ನಿಯ ಶವವನ್ನು ಕೆಳಗಿಳಿಸಿದ್ದಾರೆ.
ನವೀನ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಊರ್ಮಿಳಾ ಮಕ್ಕಳಿಗೆ ಟ್ಯೂಷನ್ ನೀಡುತ್ತಿದ್ದರು. ಊರ್ಮಿಳಾ ಹೃದ್ರೋಗದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಲುಧಿಯಾನಕ್ಕೆ ಕರೆದೊಯ್ದಿದ್ದರು. ಮಹಿಳೆಯ ಮೃತದೇಹವನ್ನುಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.