ಲಖನೌ, ಸೆ 18 (DaijiworldNews/DB): ಉತ್ತರ ಪ್ರದೇಶದ ಪ್ರಸ್ತುತ ಕಾನೂನು ಸುವ್ಯವಸ್ಥೆ ದೇಶ ಮಾತ್ರವಲ್ಲ, ವಿಶ್ವಕ್ಕೇ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪೊಲೀಸ್ ಆಧುನೀಕರಣ ಯೋಜನೆಯ ಭಾಗವಾಗಿ ಉತ್ತರ ಪ್ರದೇಶದ 56 ಜಿಲ್ಲೆಗಳಿಗೆ ಆಧುನಿಕ ಜೈಲು ವಾಹನ ಬಿಡುಗಡೆಗೊಳಿಸಿ ಭಾನುವಾರ ಮಾತನಾಡಿದ ಅವರು, 2017ಕ್ಕೂ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ ಅರಾಜಕತೆ, ಗಲಭೆ, ಗೂಂಡಾಗಿರಿಯಂತಹ ಘಟನೆಗಳೇ ಕೇಳಿ ಬರುತ್ತಿತ್ತು. ಆದರೆ ಬಳಿಕದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ರಾಜ್ಯದಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ನಿರ್ಮಾಣವಾಗಿದೆ ಎಂದರು.
ಹೊಸದಾಗಿ ಬಿಡುಗಡೆಗೊಂಡಿರುವ ಜೈಲು ವಾಹನಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಜೈಲು ಮತ್ತು ನ್ಯಾಯಾಲಯದ ನಡುವೆ ಸಂಚರಿಸುವಾಗ ಪೊಲೀಸ್ ಸಿಬಂದಿಗೆ ಅಗತ್ಯ ಭದ್ರತೆ ನೀಡುವುದು ಮತ್ತು ಕೈದಿಗಳು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ವಾಹನ ರೂಪುಗೊಂಡಿದೆ ಎಂದವರು ತಿಳಿಸಿದರು.
ಈ ಹಿಂದೆ ಕೈದಿಗಳನ್ನು ಕರೆದೊಯ್ಯಲು ಬಳಕೆಯಾಗುತ್ತಿದ್ದ ವಾಹನದಲ್ಲಿ ಯಾವುದೇ ಸೌಲಭ್ಯಗಳಿರಲಿಲ್ಲ. ಅಂತಹ ವಾಹನಗಳಿಂದ ಪರಾರಿಯಾಗಲು ಕೈದಿಗಳಿಗೆ ದಾರಿ ಸಿಗುತ್ತಿತ್ತು. ಅಲ್ಲದೆ ಅಂತಹ ವಾಹನಗಳಿಗೆ ಗ್ಯಾಂಗ್ಗಳು ದಾಳಿ ನಡೆಸಿ ಕೈದಿಗಳು ಪರಾರಿಯಾಗಲು ಸಹಾಯ ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ವಿವರಿಸಿದರು.