ಸಹರಾನ್ಪುರ, ಸೆ 18 (DaijiworldNews/DB): ಸಹರಾನ್ಪುರ ಕ್ರೀಡಾಂಗಣದಲ್ಲಿ ಶೌಚಾಲಯದಲ್ಲಿ ಇರಿಸಲಾದ ಅನ್ನವನ್ನು ಕಬಡ್ಡಿ ಆಟಗಾರರಿಗೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಶೌಚಾಲಯದಲ್ಲಿ ಅನ್ನದ ಪಾತ್ರೆ ಇರಿಸಿರುವ ಫೋಟೋಗಳು ವೈರಲ್ ಆಗಿದ್ದು, ಅದೇ ಅನ್ನವನ್ನು ನಮಗೆ ನೀಡಲಾಗಿದೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ. ಸದ್ಯ ಇದು ವಿವಾದಕ್ಕೆ ಕಾರಣವಾಗಿದೆ. ಸಹರಾನ್ಪುರ ಜಿಲ್ಲೆಯಲ್ಲಿ ಶುಕ್ರವಾರ (ಸೆಪ್ಟೆಂಬರ್ 16) ಪ್ರಾರಂಭವಾದ ಮೂರು ದಿನಗಳ ರಾಜ್ಯ ಮಟ್ಟದ ಅಂಡರ್ -17 ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಸುಮಾರು 200 ಮಂದಿ ಆಟಗಾರರು ಭಾಗವಹಿಸಿದ್ದಾರೆ. ಇವರೆಲ್ಲರಿಗೂ ಈ ಅನ್ನವನ್ನೇ ನೀಡಲಾಗಿದೆ ಎನ್ನಲಾಗಿದೆ. ಆಟಗಾರರೊಬ್ಬರು ಹೇಳಿರುವ ಪ್ರಕಾರ, ಬೇಯಿಸಿದ ಅನ್ನವನ್ನು ದೊಡ್ಡ ತಟ್ಟೆಯಲ್ಲಿ ಹಾಕಿ ಹೊರ ತೆಗೆದು ಗೇಟಿನ ಬಳಿಯಲ್ಲಿರುವ ಶೌಚಾಲಯದ ನೆಲೆದ ಮೇಲೆ ಇರಿಸಲಾಗಿತ್ತು. ಅದರ ಪಕ್ಕದಲ್ಲೇ ಕಾಗದದ ತುಂಡಿನ ಮೇಲೆ ಉಳಿದ ಪೂರಿಗಳನ್ನು ಇರಿಸಲಾಗಿತ್ತು. ಬಳಿಕ ಇದೇ ಅನ್ನವನ್ನು ಊಟಕ್ಕೆ ಬಡಿಸಲಾಗಿದೆ ಎಂದಿದ್ದಾರೆ.
ಇನ್ನು ಈ ಆರೋಪವನ್ನು ಸಹರಾನ್ಪುರದ ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾ ತಳ್ಳಿಹಾಕಿದ್ದು, ಆಟಗಾರರಿಗೆ ಗುಣಮಟ್ಟದ ಆಹಾರವನ್ನೇ ನೀಡಲಾಗಿದೆ. ಈಜುಕೊಳದ ಬಳಿಯಿರುವ ಸಾಂಪ್ರದಾಯಿಕ ಒಲೆಯಲ್ಲೇ ಆಹಾರ ತಯಾರಿಸಲಾಗಿದೆ ಎಂದಿರುವುದಾಗಿ ವರದಿಯಾಗಿದೆ.