ಬೆಂಗಳೂರು, ಸೆ 18 (DaijiworldNews/DB): ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಭೇಟಿಯಾಗಿ ಎರಡು ರಾಜ್ಯಗಳಿಗೆ ಸಂಬಂಧಿಸಿಂತೆ ಮಹತ್ವದ ಚರ್ಚೆ ನಡೆಸಿದರು.
ಚರ್ಚೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದ ಸೂಕ್ಷ್ಮ ಪರಿಸರ ಪ್ರದೇಶ ಮತ್ತು ವನ್ಯ ಜೀವಿಧಾಮಗಳಲ್ಲಿ ಯಾವುದೇ ರೀತಿಯ ಅಭಿವೃದ್ದಿ ಕಾಮಗಾರಿಗಳನ್ನು ನಡೆಸುವುದು ಸಾಧ್ಯವಿಲ್ಲ ಎಂದು ಕೇರಳ ಸರ್ಕಾರಕ್ಕೆ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು.
ಕಾಞಂಗಾಡ್- ಕಾಣಿಯೂರು ರೈಲು ಮಾರ್ಗ, ಇತರ ರೈಲ್ವೇ ಮತ್ತು ಹೆದ್ದಾರಿ ಯೋಜನೆಗಳಿಗೆ ಸಮ್ಮತಿ ನೀಡುವ ಕುರಿತಂತೆ ಚರ್ಚಿಸಲು ಕೇರಳ ಸಿಎಂ ಭೇಟಿ ಮಾಡಿದ್ದರು. ಆದರೆ ಈ ರೈಲು ಮಾರ್ಗವು ಸುಳ್ಯ ಭಾಗದಲ್ಲಿ ಇರುವುದರಿಂದ ಮತ್ತು ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶದಲ್ಲಿ ಪ್ರಸ್ತಾವಿತ ರೈಲು ಮಾರ್ಗ ಹಾದು ಹೋಗುವುದರಿಂದ ಅದಕ್ಕೆ ಸಮ್ಮತಿ ಅಸಾಧ್ಯ ಎಂದು ತಿಳಿಸಲಾಗಿದೆ ಎಂದರು.
ತಲಚೇರಿ-ಮೈಸೂರು ರೈಲು ಯೋಜನೆಯನ್ನೂ ಕೇರಳ ಸಿಎಂ ಈವೇಳೆ ಚರ್ಚಿಸಿದರು. ಈ ಯೋಜನೆಯಡಿ ಬಂಡಿಪುರ-ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮಧ್ಯಭಾಗದಲ್ಲಿ ರೈಲು ಮಾರ್ಗ ಹಾದು ಹೋಗುತ್ತದೆ. ಹೀಗಾಗಿ ಇಲ್ಲಿನ ವನ್ಯ ಜೀವಿ ಮತ್ತು ಅರಣ್ಯಕ್ಕೆ ಹೆಚ್ಚಿನ ಹಾನಿಯುಂಟಾಗುವುದರಿಂದ ಈ ಯೋಜನೆಗೆ ಸಮ್ಮತಿಯೂ ಅಸಾಧ್ಯ ಎಂದು ತಿಳಿಸಲಾಯಿತು ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.
ಇನ್ನು ಭೂಗತ ರೈಲು ಮಾರ್ಗದ ಬಗ್ಗೆ ಕೇರಳ ಸಿಎಂ ಮಾಡಿದ ಪ್ರಸ್ತಾವವನ್ನೂ ಪರಿಸರಕ್ಕೆ ಹಾನಿ ಕಾರಣ ನೀಡಿ ತಿರಸ್ಕರಿಸಲಾಗಿದೆ. ಕೊನೆಯದಾಗಿ ಬಂಡಿಪುರ ರಾಷ್ಟ್ರೀಯ ಉದ್ಯಾನದ ಮೂಲಕ ಕೇರಳಕ್ಕೆ ಎರಡು ಬಸ್ಗಳು ರಾತ್ರಿ ಸಂಚಾರ ನಡೆಸುತ್ತಿದ್ದು, ಮುಂದೆ ನಾಲ್ಕು ಬಸ್ಗಳ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಕೇಳಿದರು. ಆದರೆ ಅದಕ್ಕೂ ಒಪ್ಪಿಗೆ ನಿರಾಕರಿಸಲಾಗಿದೆ ಎಂದು ತಿಳಿಸಿದರು.