ಕೊಚ್ಚಿ, ಸೆ 18 (DaijiworldNews/DB): ಪಥನಂತಿಟ್ಟದಲ್ಲಿ ಪತ್ನಿಯ ಕೈ ಕತ್ತರಿಸಿದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಈತ ತವರುಮನೆಯಲ್ಲಿದ್ದ ಪತ್ನಿ ವಿದ್ಯಾಳ ಮನೆಗೆ ಸೆಪ್ಟೆಂಬರ್ 17ರಂದು ರಾತ್ರಿ 9 ಗಂಟೆಗೆ ಬಂದು ಆಕೆಯ ಮೇಲೆ ಹಲ್ಲೆ ನಡೆಸಿ ಆಕೆಯ ಎರಡೂ ಕೈಗಳನ್ನು ಮಚ್ಚಿನಿಂದ ಕತ್ತರಿಸಿದ್ದಾನೆ. ವಿದ್ಯಾಳ ಒಂದು ಕೈ ಮಣಿಕಟ್ಟಿನಿಂದ ಮತ್ತೊಂದು ಕೈ ಮೊಣಕೈ ಕೆಳಗಿನಿಂದ ಕತ್ತರಿಸಲ್ಪಟ್ಟಿದ್ದು, ಆಕೆಯ ತಂದೆ ವಿಜಯನ್ ಮೇಲೂ ಆರೋಪಿ ಹಲ್ಲೆ ನಡೆಸಿದ್ದ. ಕೂಡಲೇ ಇಬ್ಬರನ್ನೂ ತಿರುವನಂತಪುರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ತಡರಾತ್ರಿಯಿಂದಲೇ ಶಸ್ತ್ರಚಿಕಿತ್ಸೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಸಂತೋಷ್ ಮತ್ತು ವಿದ್ಯಾ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ವಿದ್ಯಾ ಕಳೆದ ಐದು ವರ್ಷಗಳಿಂದ ಕಳಂಜೂರಿನ ತವರು ಮನೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ ಕೆಲ ದಿನಗಳಿಂದ ಸಂತೋಷ್ ವಿದ್ಯಾಳ ಮನೆಯ ಬಳಿ ತಿರುಗಾಡುತ್ತಿರುವುದನ್ನು ನೆರೆಹೊರೆಯವರು ನೋಡಿದ್ದರು ಎನ್ನಲಾಗಿದೆ. ಹೀಗಾಗಿ ಸೇಡು ತೀರಿಸಿಕೊಳ್ಳಲೆಂದು ಆತ ಹೊಂಚು ಹಾಕಿದ್ದ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ಮೊಬೈಲ್ ನೆಟ್ವರ್ಕ್ ಆಧಾರಿತವಾಗಿ ಮತ್ತು ಇತರ ಪೊಲೀಸ್ ಠಾಣೆಗಳ ಪೊಲೀಸರ ಸಹಕಾರದೊಂದಿಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.