ನವದೆಹಲಿ, ಸೆ 18 (DaijiworldNews/DB): ಬಿಜೆಪಿಗೆ ಗುಜರಾತ್ ಚುನಾವಣೆಯ ಸೋಲಿನ ಭೀತಿ ಎದುರಾಗಿದೆ. ಅದಕ್ಕಾಗಿಯೇ ಭ್ರಷ್ಟಾಚಾರ ವಿರುದ್ದ ಹೋರಾಡುವ ನೆಪದಲ್ಲಿ ಆಮ್ ಆದ್ಮಿ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಪಕ್ಷದ ಚುನಾಯಿತ ಜನಪ್ರತಿನಿಧಿಗಳ ಮೊದಲ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ಗುಜರಾತ್ನಲ್ಲಿ ಎಎಪಿಯ ಬೆಳವಣಿಗೆ ಮತ್ತು ಜನಪ್ರಿಯತೆಯನ್ನು ಸಹಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ ಸೋಲುವ ಆತಂಕದಲ್ಲಿ ಆ ಪಕ್ಷ ಮುನ್ನಡೆಯುತ್ತಿದೆ. ಹೀಗಾಗಿ ಹೇಗಾದರು ಮಾಡಿ ಎಎಪಿಯನ್ನು ಮುಗಿಸಬೇಕೆಂದು ಪಣ ತೊಟ್ಟಿದೆ. ಅದಕ್ಕಾಗಿ ಎಎಪಿಯ ಸಚಿವರು ಹಾಗೂ ಮುಖಂಡರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಇನ್ನಿಲ್ಲದ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವು ಖಚಿತ. ಅಲ್ಲಿ ಎಎಪಿಯೇ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.