ನೆಲ್ಲೂರು, ಸೆ 18 (DaijiworldNews/HR): ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಕೆಲವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಇಂದು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ಆಂಧ್ರ ಪ್ರದೇಶದ ಕರ್ನೂಲ್, ನೆಲ್ಲೂರ್, ನಂದ್ಯಾಲ್ ಮತ್ತು ತೆಲಂಗಾಣದ ನಿಜಾಮಾಬಾದ್ ನಲ್ಲಿ ಎನ್ಐಎ ದಾಳಿ ನಡೆಸಿದ್ದು, ನಿಜಾಮಾಬಾದ್ ನಲ್ಲಿರುವ ಅಬ್ದುಲ್ ಖಾದರ್ ಅವರ ಮನೆಯನ್ನು ಪಿಎಫ್ಐ ಸದಸ್ಯರು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ ಎಂದು ಎಫ್ ಐಆರ್ ದಾಖಲಿಸಲಾಗಿದೆ.
ಇನ್ನು ಅಬ್ದುಲ್ ಖಾದರ್ ಅವರು ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಹೆಚ್ಚುವರಿ ಭಾಗವನ್ನು ಪಿಎಫ್ಐ ಸದಸ್ಯರು ತಮ್ಮ ಸಭೆಗಳು ಮತ್ತು ತರಬೇತಿಗಳಿಗೆ ಬಳಸಲು ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ.