ಚಂಡೀಗಡ, ಸೆ 18 (DaijiworldNews/DB): ಹಾಸ್ಟೆಲ್ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ರೀತಿಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆದೇಶಿಸಿದ್ದಾರೆ.
ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಅವರು, ಚಂಡೀಗಡ ವಿಶ್ವವಿದ್ಯಾನಿಲಯ ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಮಾಡಿರುವುದು ಅಹಿತಕರವಾದ ಘಟನೆಯಾಗಿದೆ. ಈ ವಿಚಾರ ಕೇಳಿ ಅತೀವ ಬೇಸರವಾಯಿತು. ತಪ್ಪಿತಸ್ಥರು ಯಾರೇ ಆದರೂ ಕಠಿಣ ಕ್ರಮ ಕೈಗೊಂಡು ಮುಂದೆ ಯಾವತ್ತೂ ಈ ರೀತಿ ಆಗದಂತೆ ತಡೆಯಲಾಗುವುದು. ಈ ಸಂಬಂಧ ಈಗಾಗಲೇ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಘಟನೆಯನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ವದಂತಿಗಳಿಗೆ ಯಾರೂ ಕಿವಿಗೊಡಬಾರದು. ವಿದ್ಯಾರ್ಥಿನಿಯರು ತಾಳ್ಮೆಯಿಂದಿರಬೇಕು ಎಂದವರು ಇದೇ ವೇಳೆ ಮನವಿ ಮಾಡಿದ್ದಾರೆ.
ಚಂಡೀಗಡ ವಿಶ್ವವಿದ್ಯಾನಿಲಯದ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿದ್ದ ವೇಳೆ ಓರ್ವ ವಿದ್ಯಾರ್ಥಿನಿ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಅದನ್ನು ಶಿಮ್ಲಾದ ವ್ಯಕ್ತಿಯೋರ್ವನಿಗೆ ಕಳುಹಿಸಿದ್ದು, ಆತ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣ ವೀಕ್ಷಿಸುತ್ತಿದ್ದಾಗ ಈ ವೀಡಿಯೋ ಗಮನಕ್ಕೆ ಬಂದಿದ್ದು, ಶನಿವಾರ ರಾತ್ರೋರಾತ್ರಿ ಹಾಸ್ಟೆಲ್ ವಿದ್ಯಾರ್ಥಿನಿಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಕೆಲವು ವಿದ್ಯಾರ್ಥಿನಿಯರು ಆಘಾತದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವದಂತಿಗಳು ಹರಡಿದ್ದವು. ಘಟನೆ ಸಂಬಂಧ ವೀಡಿಯೋ ಕಳುಹಿಸಿದ್ದ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದರು.
ಇನ್ನು ಪ್ರಕರಣವನ್ನು ಖಂಡಿಸಿ ಪಂಜಾಬ್ನ ಮೊಹಾಲಿಯಲ್ಲಿ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.