ನವದೆಹಲಿ, ಸೆ 18 (DaijiworldNews/DB): ಕ್ಯಾಮೆರಾ ಲೆನ್ಸ್ ಕವರ್ ತೆಗೆಯದೇ ಪ್ರಧಾನಿ ನರೇಂದ್ರ ಮೋದಿಯವರು ಫೋಟೋ ತೆಗೆಯುತ್ತಿದ್ದಾರೆ ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹಲವರು ಬಿಜೆಪಿ ಕಾಲೆಳೆದಿದ್ದರು. ಇದಕ್ಕೆ ಇದೀಗ ಬಿಜೆಪಿ ತಿರುಗೇಟು ನೀಡಿದ್ದು, ಇದು ಎಡಿಟೆಡ್ ಫೋಟೋ ಎಂದು ತಿಳಿಸಿದೆ. ಅಲ್ಲದೆ ನೈಜ ಫೋಟೋವನ್ನು ಬಿಡುಗಡೆ ಮಾಡಿದೆ.
ಶನಿವಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚೀತಾಗಳನ್ನು ಬಿಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನಿಕಾನ್ ಕ್ಯಾಮರಾದಲ್ಲಿ ಅದರ ಚಿತ್ರಗಳನ್ನು ಸೆರೆ ಹಿದಿಡಿದ್ದರು. ಆದರೆ ಯಾರೋ ಈ ಫೋಟೋವನ್ನು ಎಡಿಟ್ ಮಾಡಿ ನಿಕಾನ್ ಕ್ಯಾಮರಾದ ಲೆನ್ಸ್ಗೆ ಕೆನಾನ್ ಕ್ಯಾಮರಾದ ಕವರ್ನ್ನು ಅಳವಡಿಸಿ ಫೋಟೋ ಹರಿಯಬಿಟ್ಟಿದ್ದರು. ಲೆನ್ಸ್ ಕವರ್ ತೆರೆಯದೆ ಫೋಟೋ ಸೆರೆ ಹಿಡಿಯುತ್ತಿರುವುದಾಗಿ ಫೋಟೋ ಎಡಿಟ್ ಮಾಡಲಾಗಿತ್ತು.
ಆದರೆ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸಿರ್ಕಾರ್ ಅವರು ಈ ಎಡಿಟೆಡ್ ಫೋಟೋವನ್ನು ಟ್ವಿಟರ್ನಲ್ಲಿ ಪ್ರಕಟಿಸಿ ಪ್ರಧಾನಿಯವರನ್ನು ಲೇವಡಿ ಮಾಡಿದ್ದರು. ಬಳಿಕ ಹಲವರು ಈ ಫೋಟೋವನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಾಲೆಳೆದಿದ್ದರು. ಆದರೆ, ಇದೀಗ ನೈಜ ಫೋಟೋವನ್ನು ಪ್ರಕಟಿಸುವ ಮೂಲಕ ಬಿಜೆಪಿಯು ಟಿಎಂಸಿ ಸಂಸದ ಹಾಗೂ ಇತರರಿಗೆ ಟಕ್ಕರ್ ನೀಡಿದೆ. ನಿಕಾನ್ ಕ್ಯಾಮರಾದ ಲೆನ್ಸ್ ಮುಂಭಾಗದಲ್ಲಿ ಕೆನಾನ್ ಕವರ್ ಅಳವಡಿಸಿರುವುದು ಎಡಿಟೆಡ್ ಫೋಟೋದಲ್ಲಿ ಸ್ಪಷ್ಟವಾಗಿದೆ. ಅಲ್ಲದೆ ಸಾಮಾನ್ಯ ಜ್ಞಾನ ಹೊಂದಿರುವ ವ್ಯಕ್ತಿಯನ್ನು ನೇಮಿಸಿಕೊಳ್ಳಿ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಸಲಹೆ ಮಾಡಿದೆ.
ನೈಜ ಫೋಟೋ ಬಿಡುಗಡೆಯಾಗುತ್ತಿದ್ದಂತೆ ಸಂಸದ ಜವಾಹರ್ ಸಿರ್ಕಾರ್ ಅವರು ತಮ್ಮ ಪೋಸ್ಟ್ನ್ನು ಅಳಿಸಿ ಹಾಕಿದ್ದಾರೆ ಎನ್ನಲಾಗಿದೆ.