ಚಂಡೀಘಡ, ಸೆ 18 (DaijiworldNews/DB): ಆಕ್ಷೇಪಾರ್ಹ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿವೆ ಎಂದು ಆರೋಪಿಸಿ ಪಂಜಾಬ್ನ ಚಂಡೀಘಡ ವಿಶ್ವವಿದ್ಯಾನಿಯಲದ ವಿದ್ಯಾರ್ಥಿನಿಯರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ವೀಡಿಯೋ ಹಂಚಿಕೊಂಡ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿದ್ದ ವೇಳೆ ವಿದ್ಯಾರ್ಥಿನಿಯೋರ್ವಳು ವೀಡಿಯೋ ಚಿತ್ರೀಕರಣ ಮಾಡಿದ್ದು, ಅದನ್ನು ಹಿಮಾಚಲ ಪ್ರದೇಶದ ಶಿಮ್ಲಾದ ವ್ಯಕ್ತಿಯೊಬ್ಬನಿಗೆ ಕಳುಹಿಸಿದ್ದು, ಆತ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಎನ್ನಲಾಗಿದೆ. ಸಾಮಾಜಿಕ ಜಾಲತಾಣ ವೀಕ್ಷಿಸುತ್ತಿದ್ದಾಗ ಇತರ ವಿದ್ಯಾರ್ಥಿನಿಯರು ಈ ವೀಡಿಯೋವನ್ನು ನೋಡಿ ಆತಂಕಿತರಾಗಿದ್ದಾರೆ. ಕೆಲವರು ಆತ್ಮಹತ್ಯೆಗೂ ಯತ್ನಿಸಿದ್ದಾರೆ ಎಂದು ವದಂತಿಗಳು ಹರಡಿದ್ದವು. ಭಯಗೊಂಡ ವಿದ್ಯಾರ್ಥಿನಿಯರು ರಾತ್ರಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ವೀಡಿಯೊ ಹಂಚಿಕೊಂಡ ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ.
ಇನ್ನು ಘಟನೆ ಕುರಿತು ಮಾಹಿತಿ ನೀಡಿರುವ ಮೊಹಾಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೋನಿ, ಘಟನೆಯಲ್ಲಿ ಯಾರೂ ಆತ್ಮಹತ್ಯೆ ಯತ್ನ ನಡೆಸಿಲ್ಲ. ಸಾವು-ನೋವುಗಳು ಸಂಭವಿಸಿಲ್ಲ. ಫೋರೆನ್ಸಿಕ್ ಸಾಕ್ಷಿಗಳನ್ನು ಕಲೆ ಹಾಕಲಾಗುತ್ತಿದ್ದು, ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಈಗಾಗಲೇ ಮೊದಲು ವೀಡಿಯೋ ಹಂಚಿಕೊಂಡ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರು ಆತುರ ಪಡದೆ, ಶಾಂತಿ ಕಾಪಾಡಬೇಕು. ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂದು ಪಂಜಾಬ್ನ ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈಲ್ಸ್ ತಿಳಿಸಿರುವುದಾಗಿ ವರದಿಯಾಗಿದೆ. ಘಟನೆಯಿಂದ ಓರ್ವ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದು, ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಆತ್ಮಹತ್ಯೆ ಯತ್ನ ನಡೆದಿಲ್ಲ. ಅಸಲಿಗೆ ಯಾವುದೇ ಆಕ್ಷೇಪಾರ್ಹ ವೀಡಿಯೋ ಸೋರಿಕೆಯಾಗಿಲ್ಲ ಎಂದು ವಿದ್ಯಾರ್ಥಿ ಕಲ್ಯಾಣ ಸಮಿತಿಯ ನಿರ್ದೇಶಕ ಡಾ.ಅರವಿಂದ್ ಸಿಂಗ್ ಕಂಗ್ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.