ರಾಯ್ ಬರೇಲಿ, ಸೆ 18 (DaijiworldNews/DB): ರಾಷ್ಟ್ರಧ್ವಜ ಸುಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ರಾಯ್ ಬರೇಲಿ ಪೊಲೀಸರು ಬಂಧಿಸಿದ್ದಾರೆ.
ನರೇಂದ್ರ ಸೈನಿ(27) ಬಂಧಿತ ಆರೋಪಿ. ಶಿವಗಢದಲ್ಲಿದ್ದ ಈತನನ್ನು ಪೊಲೀಸರು ಬಂಧಿಸಿದರು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಈತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ನಿರುದ್ಯೋಗಿಯಾಗಿದ್ದ ನರೇಂದ್ರ ಸೈನಿ ಉದ್ಯೋಗ ಸಿಗದೆ ಹತಾಶನಾಗಿದ್ದ. ಮೂರು ತಿಂಗಳ ಹಿಂದೆ ಹೆತ್ತವರೊಂದಿಗೆ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿ ಅಜ್ಜ-ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ವಿರುದ್ದ ಮತ್ತು ಆತನ ಕುಟುಂಬದ ಮೇಲೆ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ. ಅಲ್ಲದೆ ಯಾವುದೇ ರಾಜಕೀಯ ಪಕ್ಷ, ಸಿದ್ದಾಂತಗಳನ್ನು ಒಳಗೊಂಡಿಲ್ಲ ಎಂದು ಮಹಾರಾಜ್ ಗಂಜ್ ನ ಸರ್ಕಲ್ ಅಧಿಕಾರಿ ರಾಮ್ ಕಿಶೋರ್ ಸಿಂಗ್ ಹೇಳಿದ್ದಾರೆ.
ಆರೋಪಿಯು ತ್ರಿವರ್ಣ ಧ್ವಜ ಸುಡುವ ಆಕ್ಷೇಪಾರ್ಹ ವೀಡಿಯೋವನ್ನು ಸೆಪ್ಟೆಂಬರ್ 16 ರ ಮುಂಜಾನೆ ವೇಳೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ವೀಡಿಯೋ ಅಪ್ಲೋಡ್ ಆಗಿರುವುದು ಗಮನಕ್ಕೆ ಬಂದ ಕೂಡಲೇ ಆರೋಪಿಯ ಪತ್ತೆಗಾಗಿ ತಂಡ ರಚಿಸಲಾಯಿತು. ಬಳಿಕ ಆತನನ್ನು ಶಿವಗಢ ಪ್ರದೇಶದ ಜಗದೀಶ್ ಪುರ ಗ್ರಾಮದಲ್ಲಿ ಬಂಧಿಸಲಾಯಿತು ಎಂದು ಎಸ್.ಹೆಚ್.ಒ, ರಾಕೇಶ್ ಚಂದ್ರ ಹೇಳಿದರು.