ಜೈಪುರ, ಸೆ 18 (DaijiworldNews/DB): ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ರಾಹುಲ್ ಗಾಂಧಿ ಅವರನ್ನು ಅವಿರೋಧವಾಗಿ ನೇಮಿಸುವ ನಿರ್ಣಯವನ್ನು ಕಾಂಗ್ರೆಸ್ನ ರಾಜಸ್ಥಾನ ಘಟಕವು ಅಂಗೀಕರಿಸಿದೆ.
ಜೈಪುರದಲ್ಲಿ ಶನಿವಾರ ನಡೆದ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಸಭೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಧ್ಯಕ್ಷರನ್ನಾಗಿ ನೇಮಕ ಮಾಡುವ ನಿರ್ಣಯವನ್ನು ಪ್ರಸ್ತಾಪಿಸಿದರು. ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ರಾಹುಲ್ ಅವರ ಮನವೊಲಿಸಬೇಕು ಎಂದು ಅವರು ತಿಳಿಸಿದರು.
ಸೆ.22ರಂದು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಧಿಸೂಚನೆ ಹೊರಬೀಳಲಿದ್ದು, ಸೆಪ್ಟೆಂಬರ್ 24ರಿಂದ 30ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇರಲಿದೆ. ಅಕ್ಟೋಬರ್ 8 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಅಕ್ಟೋಬರ್ 17ರಂದು ಚುನಾವಣೆ ನಡೆದು 19ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಆದರೆ ಚುನಾವಣೆ ಅಗತ್ಯವಿದ್ದಲ್ಲಿ ಮಾತ್ರ ನಡೆಯಲಿದೆ ಎಂದು ತಿಳಿದು ಬಂದಿದೆ.