ಡೆಹ್ರಾಡೂನ್, ಸೆ 18 (DaijiworldNews/DB): ತನ್ನಿಷ್ಟದ ಆಹಾರವನ್ನು ತಾಯಿ ತಯಾರಿಸಿಕೊಟ್ಟಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಬಾಲಕಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದಿದೆ.
16 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾದವಳು. ಡೆಹ್ರಾಡೂನ್ನ ರಾಯಪುರದ ದಾದಾ ಲಕ್ಹ್ಕೊಂಡ್ ಪ್ರದೇಶದಲ್ಲಿ ಗುರುವಾರ ಘಟನೆ ನಡೆದಿದೆ. ತಾಯಿ ತನ್ನಿಷ್ಟದ ಆಹಾರ ತಯಾರಿಸಿಕೊಟ್ಟಿಲ್ಲವೆಂದು ಬಾಲಕಿ ತಾಯಿಯೊಂದಿಗೆ ಗಲಾಟೆ ಮಾಡಿದ್ದಾಳೆ. ಅಲ್ಲದೆ ತಾಯಿ ನೀಡಿದ ಆಹಾರ ಸೇವಿಸಲು ನಿರಾಕರಿಸಿದ್ದಾಳೆ. ಬಳಿಕ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಎಷ್ಟೊತ್ತಾದರೂ ಆಕೆ ಬಾಗಿಲು ತೆರೆಯದ ಕಾರಣ ಬಾಗಿಲು ಒಡೆದು ಒಳಹೋಗಿ ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821