ಪುತ್ತೂರು, ಸೆ 18 (DaijiworldNews/HR): ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಜಂಬೋ ಜೆಟ್ ವಿಮಾನದ ಮೂಲಕ ಎಂಟು ಚೀತಾಗಳನ್ನು ಭಾರತಕ್ಕೆ ತರದಿಂದಿದ್ದು, ಚೀತಾಗಳನ್ನು ಕರೆತಂದ ತಂಡದ ಮೂವರು ಭಾರತೀಯರ ಪೈಕಿ ಓರ್ವರು ಪುತ್ತೂರಿನ ಡಾ. ಸನತ್ ಕೃಷ್ಣ ಮುಳಿಯರಾಗಿದ್ದಾರೆ.
ಕೇಂದ್ರ ಸರಕಾರದ ಪರಿಸರ ಇಲಾಖೆಯ ಅಧೀನದ ಹೊಸದಿಲ್ಲಿಯ ನ್ಯಾಶನಲ್ ಜಿಯೋಲಜಿಕಲ್ ಪಾರ್ಕ್ನಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸನತ್ ಕೃಷ್ಣ ಮುಳಿಯ ಅವರು ಸ್ವರ್ಣ ಉದ್ಯಮಿಯಾಗಿದ್ದ ದಿ.ಕೇಶವ ಭಟ್ ಮತ್ತು ಉಷಾ ಭಟ್ ಮುಳಿಯ ಅವರ ಪುತ್ರ.
ಇನ್ನು ಸನತ್ ಅವರು ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಪಿಯುಸಿ ಶಿಕ್ಷಣ ಪೂರೈಸಿ ಪಿಯುಸಿಯಲ್ಲಿರುವಾಗ ಕ್ಯಾ.ಮಹೇಶ್ ರೈ ಅವರಿಂದ ಎನ್ಸಿಸಿ ತರಬೇತಿಯನ್ನು ಪಡೆದುಕೊಂಡಿದ್ದು ಬಳಿಕ ಬೆಂಗಳೂರಿನಲ್ಲಿ ಬಿವಿಎಸ್ ಸಿ-ಎನ್ವಿ ಎಸ್ಸಿ ಪದವಿ ಪಡೆದವರು. ವನ್ಯಜೀವಿ ಹಾಗೂ ಅರಿವಳಿಕೆ ವಿಭಾಗದಲ್ಲಿ ಉನ್ನತ ಅಧ್ಯಯನ ಮಾಡಿ ಬಳಿಕ ಆಫ್ರಿಕಾದ ಬೋಸ್ವಾನದಲ್ಲಿ ಒಂದೂವರೆ ವರ್ಷ ಕರ್ತವ್ಯ ನಿರ್ವಹಿಸಿದ್ದು, ಬಳಿಕ ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಪಡೆದು ನವದೆಹಲಿಗೆ ವಾಪಾಸಾಗಿ ಸೇವೆಗೆ ಸೇರಿಕೊಂಡಿದ್ದಾರೆ.
ಪ್ರಾಜೆಕ್ಟ್ ಚೀತಾ ಹೆಸರಿನ ಈ ಯೋಜನೆಯಲ್ಲಿ ಎಂಟು ಚೀತಾಗಳಲ್ಲಿ ಐದು ಹೆಣ್ಣು, 2ರಿಂದ 5 ವರ್ಷ ವಯಸ್ಸಿನ ನಡುವೆ ಮತ್ತು ಮೂರು 4.5ರಿಂದ5.5 ವರ್ಷದೊಳಗಿನ ಗಂಡು ಚೀತಾಗಳಿವೆ.