ಔರಂಗಾಬಾದ್, ಸೆ 17 (DaijiworldNews/DB): ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಇತ್ತೀಚೆಗೆ ಅನಾವರಣಗೊಳಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಎನ್ಸಿಪಿ ಯುವ ಘಟಕದ ಕಾರ್ಯಕರ್ತರು ಸ್ವಚ್ಛಗೊಳಿಸಿದ ಘಟನೆ ಇಂದು ಔರಂಗಾಬಾದ್ನಲ್ಲಿ ನಡೆದಿದೆ. ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ವಿರೋಧ ಪಕ್ಷದವರನ್ನು ಆಹ್ವಾನಿಸದಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಸಿಎಂ ಶಿಂಧೆ ಅವರು ಪುತ್ಥಳಿ ಅನಾವರಣಗೊಳಿಸಿದ್ದರು. ಆದರೆ ಪುತ್ಥಳಿ ಅನಾವರಣದ ವೇಳೆ ವಿರೋಧ ಪಕ್ಷದವರನ್ನು ಆಹ್ವಾನಿಸಿಲ್ಲ. ವಿಪಕ್ಷ ಮುಖಂಡರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಿಲ್ಲ ಎಂದು ಎನ್ಸಿಪಿ ಆರೋಪಿಸಿದೆ.
ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗವತ್ ಕರಾಡ್, ಸಚಿವ ಸಂದೀಪನ್ ಬುಮ್ರೆ, ಸಚಿವ ಅಬ್ದುಲ್ ಸತ್ತಾರ್, ಉದಯ್ ಸಾಮಂತ್, ಅತುಲ್ ಸಾವೇ ಆಹ್ವಾನದಲ್ಲಿದ್ದರೆ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಆದರೆ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಸೇರಿದಂತೆ ವಿಪಕ್ಷದ ಹಲವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಇರಲಿಲ್ಲ ಎಂದು ಎನ್ಸಿಪಿಯ ವಿದ್ಯಾರ್ಥಿ ಘಟಕ ಆಪಾದಿಸಿದೆ.
ಪ್ರತಿಮೆಯನ್ನು ದೇಶದ್ರೋಹಿ ಮುಖ್ಯಮಂತ್ರಿ ಅನಾವರಣಗೊಳಿಸಿದ್ದಾರೆ. ಹೀಗಾಗಿ ಸ್ವಚ್ಚಗೊಳಿಸುತ್ತಿದ್ದೇವೆ ಎಂದು ಎನ್ಸಿಪಿ ಯುವ ಮುಖಂಡರು ಮಾಧ್ಯಮಗಳಿಗೆ ಹೇಳಿರುವುದಾಗಿ ತಿಳಿದು ಬಂದಿದೆ.