ಕೊಚ್ಚಿ, ಸೆ 17 (DaijiworldNews/DB): ಮೂರು ವರ್ಷಗಳ ಹಿಂದೆ ಕಣ್ಣೂರಿನಲ್ಲಿ ನನ್ನ ಮೇಲೆ ದೈಹಿಕ ದಾಳಿ ಮತ್ತು ಹತ್ಯೆಗೆ ಯತ್ನ ನಡೆದಿತ್ತು ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ಕೊಚ್ಚಿಯಲ್ಲಿ ಮಾತನಾಡಿದ ಅವರು, ದೇಶದ ಹೊರಗೆ ಹುಟ್ಟಿಕೊಂಡ ಕೆಲವು ಸಿದ್ದಾಂತಗಳು ರಾಜಕೀಯ ದುರುದ್ದೇಶದಿಂದ ಹಲವು ರೀತಿಯ ಪಿತೂರಿಗಳನ್ನು ನಡೆಸುತ್ತಿವೆ. ನನ್ನ ವಿರುದ್ದವೂ ಅಂತಹ ಪಿತೂರಿ ನಡೆದಿತ್ತು. ದೈಹಿಕ ದಾಳಿ ನಡೆಸಿ ಕೊಲೆ ಮಾಡುವ ಪ್ರಯತ್ನ ನಡೆದಿತ್ತು ಎಂದರು.
ಈ ಘಟನೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸದಂತೆ ತಡೆಯಲಾಗಿತ್ತು. ರಾಜ್ಯಪಾಲರ ಕಚೇರಿಯನ್ನು ಕೀಳಾಗಿ ಕಾಣುವುದರೊಂದಿಗೆ ನನ್ನ ಮೇಲೆ ಒತ್ತಡ ಹೇರಿ, ನನ್ನಲ್ಲಿ ಭಯ ಹುಟ್ಟಿಸಲು ಸಾಕಷ್ಟು ತಂತ್ರಗಳನ್ನು ನಡೆಸಲಾಗಿದೆ ಎಂದು ಎಡ ಪಕ್ಷಗಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವವಿದ್ಯಾನಿಲಯ ಕಾನೂನು ತಿದ್ದುಪಡಿ ಮಸೂದೆ ಕುರಿತು ಪ್ರತಿಕ್ರಿಯಿಸಿದ ಅವರು, ಅರ್ಹತೆಯ ಮೇಲೆಯೇ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಉಪಕುಲಪತಿಗಳನ್ನು ನಿರ್ವಹಣೆ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವುದರಿಂದ ಕಾರ್ಯನಿರ್ವಹಣೆಯಲ್ಲಿನ ಹಸ್ತಕ್ಷೇಪಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಇದಕ್ಕೆ ಮುಂದೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಉಪ ಕುಲಪತಿ ನೇಮಕ ವಿಚಾರ ಪ್ರಸ್ತಾಪಿಸಿರುವ ಮುಖ್ಯಮಂತ್ರಿಯವರು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದಾಗಿ ಪತ್ರ ಬರೆದಿದ್ದಾರೆ. ಆದರೆ ಇದರಿಂದ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಗೆ ಹಾನಿಯಾಗುತ್ತದೆ. ನಾನು ರಾಜ್ಯದಲ್ಲಿರುವವರೆಗೂ ಅದಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದರು.