ಹೈದರಾಬಾದ್, ಸೆ 17 (DaijiworldNews/HR): ಧಾರ್ಮಿಕ ಮತಾಂಧತೆ ಬೆಳೆದರೆ ರಾಷ್ಟ್ರವೇ ನಾಶವಾಗಿ, ಮಾನವ ಸಂಬಂಧಗಳು ಹದಗೆಡುತ್ತವೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್(ಕೆಸಿಆರ್) ಹೇಳಿದ್ದಾರೆ.
ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋಮುವಾದಿಗಳು ತಮ್ಮ ಸಂಕುಚಿತ ಹಿತಾಸಕ್ತಿಗಳಿಗಾಗಿ ಸಮಾಜದಲ್ಲಿ ಮುಳ್ಳುಗಳನ್ನು ಬಿತ್ತುತ್ತಿದ್ದು, ತಮ್ಮ ವಿಷಕಾರಿ ಆಲೋಚನೆಗಳಿಂದ ಜನರ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ ಎಂದರು.
ಇನ್ನು ತೆಲಂಗಾಣವು ಅತ್ಯಂತ ಪ್ರಬುದ್ಧವಾಗಿ ನಡೆದುಕೊಂಡಿದ್ದು, ಅದೇ ರೀತಿಯ ಕ್ರಿಯಾಶೀಲತೆ ಮತ್ತು ಬುದ್ಧಿವಂತಿಕೆಯನ್ನು ಮತ್ತೊಮ್ಮೆ ಪ್ರದರ್ಶಿಸಬೇಕಿದೆ. ರಾಷ್ಟ್ರದ ರಚನೆಯನ್ನು ಒಡೆಯಲು ಯತ್ನಿಸುತ್ತಿರುವ ಈ ದುಷ್ಟ ಮತ್ತು ಭ್ರಷ್ಟ ಶಕ್ತಿಗಳ ಕುತಂತ್ರಗಳನ್ನು ವಿಫಲಗೊಳಿಸಬೇಕಿದೆ ಎಂದು ಹೇಳಿದ್ದಾರೆ.