ದೇವನಹಳ್ಳಿ, ಸೆ 17 (DaijiworldNews/DB): ಪ್ರಿಯತಮೆ ಬೇರೊಬ್ಬನನ್ನು ವಿವಾಹವಾಗಿದ್ದಕ್ಕೆ ನೊಂದ ಪಾಗಲ್ ಪ್ರೇಮಿಯೊಬ್ಬ ಆಕೆಗೆ 20ಕ್ಕೂ ಹೆಚ್ಚು ಬಾರಿ ಇರಿದು ಕೊಲೆಗೈದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸೌಮ್ಯಾ (23) ಹತ್ಯೆಯಾದ ಯುವತಿ. ಆರೋಪಿ ಸುಬ್ರಹ್ಮಣ್ಯ ಸದ್ಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮದುವೆಯಾಗಿ 15 ದಿನ ಕಳೆದ ಬಳಿಕ ತವರು ಮನೆಗೆ ಬಂದಿದ್ದ ಸೌಮ್ಯಾಳನ್ನು ಮಾತನಾಡಿಸುವ ಸಲುವಾಗಿ ಆಕೆಯ ಮನೆಯ ಕೊಟ್ಟಿಗೆ ಸಮೀಪ ಬಂದಿದ್ದ ಆತ ಅಲ್ಲೇ ಆಕೆಯನ್ನು ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಚಾಕು ಇರಿತದಿಂದಾಗಿ ಗಂಭೀರ ಗಾಯಗೊಂಡಿದ್ದ ಸೌಮ್ಯಾ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾಳೆ. ಆರೋಪಿ ಸುಬ್ರಹ್ಮಣ್ಯನನ್ನು ಪೊಲೀಸರು ದೇವನಹಳ್ಳಿ ಆಕಾಶ್ ಆಸ್ಪತ್ರೆಯ ಸೇರಿಸಿದ್ದು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನೂ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಸೌಮ್ಯ ಮತ್ತು ಆರೋಪಿ ಸುಬ್ರಹ್ಮಣ್ಯ ಬೆಂಗಳೂರಿನ ನಾಗವಾರದ ಕಾಫಿ ಡೇನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಲ್ಲೂ ಪ್ರೀತಿ ಹುಟ್ಟಿತ್ತು. ಕೆಲ ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದ ಸೌಮ್ಯಾ ಸುಬ್ರಹ್ಮಣ್ಯನಿಂದ ಅಂತರ ಕಾಯ್ದುಕೊಂಡಿದ್ದಳು. ಬಳಿಕ 15 ದಿನಗಳ ಹಿಂದಷ್ಟೇ ಆಕೆಗೆ ಬೇರೆ ಯುವಕನೊಂದಿಗೆ ವಿವಾಹವಾಗಿತ್ತು. ಇದರಿಂದ ಕೋಪಗೊಂಡ ಪ್ರಿಯಕರ ಸುಬ್ರಹ್ಮಣ್ಯ ಆಕೆಯ ಕೊಲೆಗೆ ಹೊಂಚು ಹಾಕಿ ಕೊಲೆಗೈದಿದ್ದಾನೆ ಎಂದು ವರದಿಯಾಗಿದೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.