ನವದೆಹಲಿ, ಸೆ 17 (DaijiworldNews/DB): ಪ್ರಧಾನ ಮಂತ್ರಿ ಟಿಬಿ-ಮುಕ್ತ್ ಭಾರತ್ ಅಭಿಯಾನದ ಭಾಗವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಅವರ ಜನ್ಮಸ್ಥಾನವಾದ ಪಾಲಿತಾನಾದಿಂದ 40 ಮಂದಿ ಕ್ಷಯರೋಗಿಗಳನ್ನು ದತ್ತು ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಈ ದತ್ತು ಸ್ವೀಕಾರ ಮಾಡಿದ್ದೇನೆ. ನೀವೂ ಸಹ ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಂಡು ಅವರಿಗೆ ಉತ್ತಮ ಆರೋಗ್ಯ, ಜೀವನ ಸಿಗಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಅವರು, 2025ರ ವೇಳೆಗೆ ಕ್ಷಯರೋಗ ಮುಕ್ತವಾಗುವ ಗುರಿಯನ್ನು ಭಾರತ ಹೊಂದಿದೆ. ಕ್ಷಯ ರೋಗಿಗಳಿಗೆ ಸಮುದಾಯ ಬೆಂಬಲ ಕಾರ್ಯಕ್ರಮದ ಮೂಲಕ ಕ್ಷಯ ರೋಗಿಗಳನ್ನು ದತ್ತು ಪಡೆಯಲು ಮುಂದೆ ಬರಬೇಕು. ಆ ಮೂಲಕ ಗುರಿ ತಲುಪಲು ಪ್ರತಿಯೊಬ್ಬ ದಾನಿಯೂ ಸಹಕರಿಸಬೇಕು ಎಂದವರು ತಿಳಿಸಿದ್ದಾರೆ.
ಕಾರ್ಪೊರೇಟ್ ಸಂಸ್ಥೆಗಳು, ಎನ್ಜಿಒಗಳು, ಸಾರ್ವಜನಿಕ ಮತ್ತು ಚುನಾಯಿತ ಪ್ರತಿನಿಧಿಗಳು ನಿಕ್ಷಯ್ 2.0 ವೆಬ್ಸೈಟ್ (ಸಮುದಾಯ ಬೆಂಬಲ.nikshay.in) ಮೂಲಕ ಟಿಬಿ ರೋಗಿಯನ್ನು ಅಥವಾ ಟಿಬಿ ರೋಗಿಗಳನ್ನು ದತ್ತು ಪಡೆಯುವುದು ಮತ್ತು ಆ ಮೂಲಕ ಅವರ ಚಿಕಿತ್ಸೆಗೆ ನೆರವಾಗಲು ಅವಕಾಶವಿದೆ. ಆರು ತಿಂಗಳು, ಒಂದು ವರ್ಷ, ಎರಡು ವರ್ಷ ಅಥವಾ ಮೂರು ವರ್ಷಗಳವರೆಗೆ ದತ್ತು ಸ್ವೀಕಾರಕ್ಕೆ ಅವಕಾಶವಿದೆ ಎಂದರು.
ದೇಶದಲ್ಲಿ ಒಟ್ಟು 13.51 ಲಕ್ಷ ಕ್ಷಯ ರೋಗಿಗಳಿದ್ದಾರೆ. ಈ ಪೈಕಿ 9.42 ಲಕ್ಷ ಮಂದಿ ದತ್ತು ಸ್ವೀಕಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದವರು ಇದೇ ವೇಳೆ ಮಾಹಿತಿ ನೀಡಿದರು.