ಮುಂಬೈ, ಸೆ 17 (DaijiworldNews/DB): ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ 87 ವರ್ಷದ ಮಾಣಿಕ್ರಾವ್ ಗವಿತ್ ಅವರು ನಾಸಿಕ್ನ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ 2004 ರಲ್ಲಿ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವರಾಗಿ ಹಾಗೂ 2013ರಲ್ಲಿ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು, 1980-2009ರ ಅವಧಿಯಲ್ಲಿ ನಂದೂರ್ಬರ್ ಕ್ಷೇತ್ರದಿಂದ 9 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ 2014ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.
ಗವಿತ್ ಅವರ ಪುತ್ರಿ ನಿರ್ಮಲಾ ಗವಿತ್ 2009 ಮತ್ತು 2014ರಲ್ಲಿ ಇಗಟ್ಪುರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದರು. ಅಲ್ಲದೆ, ಎರಡು ಬಾರಿಯೂ ಶಾಸಕಿಯಾಗಿ ಆಯ್ಕೆಯಾಗಿದ್ದರು. ಬಳಿಕ 2019ರಲ್ಲಿ ಶಿವಸೇನಾದಿಂದ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು. ಮಾಣಿಕ್ರಾವ್ ಪುತ್ರ ಭರತ್ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಲು ಟಿಕೆಟ್ ಸಿಗದ ಕಾರಣ 2019ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.