ಬಳ್ಳಾರಿ, ಸೆ 17 (DaijiworldNews/DB): ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಅಲ್ಲಿನ ನಿರ್ದೇಶಕರ ನಿರ್ಲಕ್ಷ್ಯವೇ ಕಾರಣ. ನಿರ್ದೇಶಕರ ನೇಮಕ ವಿಚಾರದಲ್ಲಿ ಆರೋಗ್ಯ ಸಚಿವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮ್ಸ್ ದೊಡ್ಡ ಆಸ್ಪತ್ರೆಯಾಗಿದ್ದು, ಪ್ರತಿದಿನ ಸರಾಸರಿ ಐದು ಸಾವಿರದಷ್ಟು ರೋಗಿಗಳು ಬರುತ್ತಾರೆ. ಹೀಗಾಗಿ ಆಡಳಿತದ ಬಗ್ಗೆ ಸರಿಯಾದ ಅನುಭವ ಇರುವವರನ್ನೇ ವಿಮ್ಸ್ ನಿರ್ದೇಶಕರನ್ನಾಗಿ ನೇಮಕ ಮಾಡಿ ಎಂದು ಹೇಳಿದ್ದೆವು. ಆದರೆ ನಮ್ಮ ಮಾತುಗಳನ್ನು ಆರೋಗ್ಯ ಸಚಿವರು ಗಣನಗೆ ತೆಗೆದುಕೊಳ್ಳಲಿಲ್ಲ ಎಂದರು.
ವಿಶಾಲ ಆಸ್ಪತ್ರೆಯಾಗಿರುವುದರಿಂದ ಪ್ರತಿದಿನ ನಿರ್ದೇಶಕರು ಆಸ್ಪತ್ರೆಯಲ್ಲಿ ರೌಂಡ್ ಹಾಕಿ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಿಕೊಳ್ಳಬೇಕು. ಸಿಬಂದಿಯನ್ನೂ ಸರಿಯಾಗಿ ನಿರ್ವಹಣೆ ಮಾಡಬೇಕು. ಇನ್ನು ಮುಂದಿನ ದಿನಗಳಲ್ಲಾದರೂ ಈ ರೀತಿಯ ಕೆಲಸಗಳನ್ನು ಮಾಡುವಂತಾಗಲಿ ಎಂದವರು ಇದೇ ವೇಳೆ ತಿಳಿಸಿದರು.
ನಿರ್ದೇಶಕರ ಬದಲಾವಣೆಗೆ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು. ಬದಲಾವಣೆ ಮಾಡಿದರೆ ಉತ್ತಮ. ಉತ್ತಮ ಆಡಳಿತ ಅನುಭವ ಇರುವವರನ್ನೇ ನಿರ್ದೇಶಕರನ್ನಾಗಿ ಮಾಡಬೇಕು ಎಂದವರು ಇದೇ ವೇಳೆ ಒತ್ತಾಯಿಸಿದರು.
ವಿಮ್ಸ್ನಲ್ಲಿ ನಡೆದ ಘಟನೆಯನ್ನು ಸರ್ಕಾರಿ ಪ್ರಾಯೋಜಿತ ಸಾವು ಎನ್ನುವುದು ತಪ್ಪು. ನಿತ್ಯವೂ ಹಲವರು ಸಾವನ್ನಪ್ಪುತ್ತಾರೆ, ಅದಕ್ಕೆಲ್ಲಾ ಸರ್ಕಾರ ಕಾರಣ ಎನ್ನುವುದು ಸರಿಯೇ ಎಂದು ಪ್ರಶ್ನಿಸಿದ ಅವರು, ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.