ಹೈದರಾಬಾದ್, ಸೆ 17 (DaijiworldNews/DB): ಓಟ್ ಬ್ಯಾಂಕ್ ರಾಜಕೀಯದ ದೃಷ್ಟಿಯಿಂದ ಕೆಲವರು ಹೈದರಾಬಾದ್ ವಿಮೋಚನಾ ದಿನವನ್ನು ಆಚರಣೆ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಹೈದರಾಬಾದ್ ವಿಮೋಚನಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಟಿಆರ್ ಎಸ್ ಮತ್ತು ಓವೈಸಿ ವಿರುದ್ಧ ಶನಿವಾರ ಪರೋಕ್ಷವಾಗಿ ಕಿಡಿ ಕಾರಿದ ಅವರು, ಹೈದರಾಬಾದ್ ವಿಮೋಚನೆಗೊಂಡು ಇಷ್ಟು ವರ್ಷ ಕಳೆದರೂ ತೆಲಂಗಾಣದಲ್ಲಿ ಮಾತ್ರ ಆ ದಿನವನ್ನು ಆಚರಣೆ ಮಾಡದಿರುವುದು ವಿಷಾದನೀಯ ಸಂಗತಿ. ಈ ದಿನವನ್ನು ಆಚರಣೆ ಮಾಡದಿರಲು ಓಟ್ ಬ್ಯಾಂಕ್ ರಾಜಕೀಯವೇ ಕಾರಣ ಎಂದರು.
1948 ರ ಸೆಪ್ಟೆಂಬರ್ 17 ನಿಜಾಮ್ ಆಳ್ವಿಕೆಯಲ್ಲಿ ಹಿಂದಿನ ಹೈದರಾಬಾದ್ ರಾಜ್ಯವು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡ ದಿನ. ಇದನ್ನು ಗುರುತಿಸುವುದಕ್ಕಾಗಿ ಕೇಂದ್ರ ಸರ್ಕಾರ ಹೈದರಾಬಾದ್ ವಿಮೋಚನಾ ದಿನವನ್ನಾಗಿ ಈ ದಿನವನ್ನು ಅಧಿಕೃತಗೊಳಿಸಿದೆ. ದಿನವನ್ನು ಸ್ಮರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಹಿರಿದು ಎಂದವರು ತಿಳಿಸಿದರು.
ಚುನಾವಣೆ ಮತ್ತು ಆಂದೋಲನದಂತಹ ಸಂದರ್ಭಗಳಲ್ಲಿ ಈ ದಿನವನ್ನು ಸ್ಮರಿಸುವ ಬಗ್ಗೆ ಭರವಸೆ ನೀಡಿದವರು ಅಧಿಕಾರಕ್ಕೆಬಂದ ಬಳಿಕ ಭರವಸೆಗಳನ್ನು ಮರೆತಂತಿದೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು ಉಲ್ಲೇಖಿಸಿ ಅಮಿತ್ ಶಾ ವಾಗ್ದಾಳಿ ನಡೆಸಿದರು.
ಬಳಿಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿ ಗೆ ಗೌರವ ನಮನ ಸಲ್ಲಿಸಿದರು. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಕರ್ನಾಟಕ ಸಾರಿಗೆ ಸಚಿವ ಬಿ. ಶ್ರೀರಾಮುಲು ಭಾಗಿಯಾಗಿದ್ದರು.