ಕೋಝಿಕ್ಕೋಡ್, ಸೆ 17 (DaijiworldNews/DB): ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳನ್ನು ರಕ್ಷಿಸಲು ವ್ಯಕ್ತಿಯೊಬ್ಬ ಏರ್ ಗನ್ ಹಿಡಿದು ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದಾರೆ. ಶಾಲೆಗೆ ತೆರಳು ಭಯಪಡುತ್ತಿರುವ ಮಕ್ಕಳ ರಕ್ಷಣೆ ಮತ್ತು ಸುರಕ್ಷಿತವಾಗಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಅವರು ಈ ಕ್ರಮ ಅನುಸರಿಸಿದ್ದಾರೆ.
ಕಾಸರಗೋಡಿನ ಬೇಕಲ್ ನಿವಾಸಿ ಸಮೀರ್ ಏರ್ಗನ್ ಹಿಡಿದು ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಬಿಡುತ್ತಿರುವವರು. ಬೀದಿನಾಯಿಗಳ ಹಾವಳಿಯಿಂದಾಗಿ ಕೇರಳದ ಜನ ಮನೆಯಿಂದ ಹೊರ ಬರಲೂ ಆತಂಕ ಪಡುತ್ತಿದ್ದಾರೆ. ಈಗಾಗಲೇ ಹಲವರ ಮೇಲೆ ಈ ನಾಯಿಗಳು ದಾಳಿ ಮಾಡಿದ್ದು, ಮಕ್ಕಳು ಶಾಲೆಗೆ ಹೋಗಲು ಭಯ ಪಡುತ್ತಿದ್ದಾರೆ. ಹೀಗಾಗಿ ಸಮೀರ್ ಅವರು ತಮ್ಮ ಮಕ್ಕಳು ಮತ್ತು ಅಕ್ಕಪಕ್ಕದ ಮನೆ ಮಕ್ಕಳು ಶಾಲೆಗೆ ಹೋಗುವಾಗ ಏರ್ಗನ್ ಹಿಡಿದುಕೊಂಡು ಅವರೊಂದಿಗೆ ಹೋಗುತ್ತಿದ್ದಾರೆ. ಸಮೀರ್ ಗನ್ ಹಿಡಿದು ಮುಂದೆ ನಡೆದರೆ, ಮಕ್ಕಳ ಗುಂಪು ಅವರ ಹಿಂದೆಯಿಂದ ಹೋಗುತ್ತಿರುವ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು ಏರ್ಗನ್ ಹಿಡಿದುಕೊಂಡು ಹೋಗುತ್ತಿರುವುದಾಗಿ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ತಾನೊಬ್ಬ ತಂದೆ. ತಂದೆಯಾಗಿ ಮಕ್ಕಳ ರಕ್ಷಣೆ ನನ್ನ ಕರ್ತವ್ಯ. ನಮ್ಮ ಊರಲ್ಲಿ ಬೀದಿ ನಾಯಿಗಳ ಕಾಟ ಕೆಲ ದಿನದಿಂದ ಹೆಚ್ಚಾಗಿದ್ದು, ಮಕ್ಕಳು ಭಯದಿಂದ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದರು. ಹೀಗಾಗಿ ನಾನು ಗನ್ ಹಿಡಿದು ಅವರೊಂದಿಗೆ ಹೋಗಬೇಕಾಗಿ ಬಂತು ಎನ್ನುತ್ತಾರೆ ಅವರು.
ಮದರಸಾ ವಿದ್ಯಾರ್ಥಿಯೊಬ್ಬನಿಗೆ ಇತ್ತೀಚೆಗಷ್ಟೇ ಬೀದಿ ನಾಯಿಯೊಂದು ಕಚ್ಚಿದೆ. ಹೀಗಾಗಿ ಮನೆಯಿಂದ ಹೊರ ಹೋಗಲು ಮಕ್ಕಳು ತುಂಬಾ ಭಯ ಪಡುತ್ತಿದ್ದರು. ಹೀಗಾಗಿ ಮಕ್ಕಳಿಗೆ ಭದ್ರತೆ ನೀಡುವ ಉದ್ದೇಶದಿಂದ ಹೀಗೆ ಮಾಡಿದೆ. ಅದನ್ನು ನನ್ನ ಮಗ ವೀಡಿಯೋ ಮಾಡಿಕೊಂಡಿದ್ದ ಎಂದವರು ಹೇಳಿದ್ದಾರೆ.
ಯಾವುದೇ ನಾಯಿಯನ್ನು ನಾನು ಕೊಂದಿಲ್ಲದ ಕಾರಣ ಕಾನೂನು ಕ್ರಮಕ್ಕೆ ಹೆದರಬೇಕಾದ ಅಗತ್ಯವಿಲ್ಲ. ಆದರೆ ನಾಯಿಗಳು ದಾಳಿ ಮಾಡಿದ್ದಲ್ಲಿ ಆತ್ಮರಕ್ಷಣೆಗಾಗಿ ಶೂಟ್ ಮಾಡಬೇಕಾದ ಅನಿವಾರ್ಯತೆ ಒದಗುತ್ತದೆ ಎಂದಿದ್ದಾರೆ. ಇನ್ನು ಘಟನೆ ಬಗ್ಗೆ ತಿಳಿದಿದ್ದು, ಯಾವುದೇ ದೂರುಗಳು ಬಂದಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.