ಕೊಲ್ಲಂ, ಸೆ 17 (DaijiworldNews/DB): ಕಳೆದ ನಾಲ್ಕೂವರೆ ದಶಕಗಳಲ್ಲಿಯೇ ನಿರುದ್ಯೋಗ ಸಮಸ್ಯೆ ದೇಶದಲ್ಲಿ ಸಾರ್ವಕಾಲಿಕ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
'ಭಾರತ್ ಜೋಡೊ ಯಾತ್ರೆ'ಯ ಒಂಬತ್ತನೇ ದಿನ ಕೇರಳದ ಕೊಲ್ಲಂನ ಕರುನಾಗಪಲ್ಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವಶಕ್ತಿಯ ಸದ್ವಿನಿಯೋಗದಿಂದ ದೇಶ ವೇಗವಾಗಿ ಬೆಳೆಯಲು ಸಾಧ್ಯ. ಸರ್ಕಾರದಿಂದ ಯುವಕರು ಏನು ನಿರೀಕ್ಷಿಸುತ್ತಾರೆ ಎಂಬುದನ್ನು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಹಲವು ಯುವಕರು ಹೇಳಿಕೊಂಡಿದ್ದಾರೆ ಎಂದರು.
ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಭಾರತದಲ್ಲಿದ್ದರೂ ನಿರುದ್ಯೋಗ ನಮ್ಮಲ್ಲೇ ಹೆಚ್ಚಿರಲು ಕಾರಣವೇನು ಎಂದು ಪ್ರಶ್ನಿಸಿದ ಅವರು, ಶ್ತೀಮಂತ ಉದ್ಯಮಿಗಳ ಭವಿಷ್ಯ ಬಲಪಡಿಸಲು ಎನ್ಡಿಎ ಸರ್ಕಾರ ಶ್ರಮಿಸುತ್ತಿದೆ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಅವರಿಗೆ ಬೇಕಾಗಿಲ್ಲ. ಆದರೆ ದೇಶದ ಯುವಶಕ್ತಿಯ ಭವಿಷ್ಯ ಭದ್ರಪಡಿಸುವುದು ಕಾಂಗ್ರೆಸ್ ಪಕ್ಷದ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಮತ್ತು ಹೂಡಿಕೆ ಹಿಂತೆಗೆತದಿಂದಾಗಿ ದೇಶದಲ್ಲಿ ಹಲವರು ಕೆಲಸ ಕಳೆದುಕೊಳ್ಳುತ್ತಿದ್ದು, ಇದರಿಂದ ನಿರುದ್ಯೋಗದ ಮಟ್ಟ ಏರಿಕೆಯಾಗುತ್ತಿದೆ. ಸಾರ್ವಜನಿಕ ವಲಯದ ಉದ್ಯಮ ದೇಶದ ಐದಾರು ಉದ್ಯಮಿಗಳ ಪಾಲಾಗುತ್ತಿದೆ. ಸರ್ಕಾರದ ಲಾಭವನ್ನು ವರೇ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.