ವಯನಾಡು, ಸೆ 16 (DaijiworldNews/DB): ಯುವತಿಯೊಬ್ಬಳು ಸೆಲ್ಫೀ ತೆಗೆದುಕೊಂಡು ವಾಟ್ಸಾಪ್ ಸ್ಟೇಟಸ್ ಹಾಕಿ ಬಳಿಕ ನೀರು ತುಂಬಿರುವ ಕಲ್ಲು ಕ್ವಾರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಯನಾಡು ಜಿಲ್ಲೆಯ ಅಂಬಲವಾಯಲ್ ಗ್ರಾಮದಲ್ಲಿರುವ ವಿಕಾಸ್ ಕಾಲನಿ ಸಮೀಪ ನಡೆದಿದೆ.
ಸುಲ್ತಾನ ಬಥೇರಿಯಲ್ಲಿ ಲ್ಯಾಬ್ಟೆಕ್ನೀಶಿಯನ್ ಆಗಿರುವ ಪ್ರವೀಣಾ (20) ಮೃತ ಯುವತಿ. ನೀರು ತುಂಬಿದ್ದ ಕಲ್ಲು ಕ್ವಾರಿ ಬಳಿ ನಿಂತು ಸೆಲ್ಫೀ ತೆಗೆದುಕೊಂಡು ಅದನ್ನು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡ ಪ್ರವೀಣಾ, ಬಳಿಕ ಕ್ವಾರಿಗೆ ಜಿಗಿದಿದ್ದಾಳೆ. ಸ್ಟೇಟಸ್ ನೋಡಿದ ಸಹೋದರ ಕ್ವಾರಿಯತ್ತ ಬಂದಿದ್ದು, ಸಹೋದರಿ ಕ್ವಾರಿಯಲ್ಲಿ ಬಿದ್ದಿರುವುದನ್ನು ನೋಡಿ ಆತನೂ ಜಿಗಿದು ರಕ್ಷಿಸಲು ಪ್ರಯತ್ನಿಸಿದ್ದಾನೆ. ಆದರೆ ಆತನಿಗೆ ಈಜು ಬಾರದ ಕಾರಣ ರಕ್ಷಣೆ ಸಾಧ್ಯವಾಗಲಿಲ್ಲ.
ಸಹೋದರ ಕ್ವಾರಿಯೊಳಗೆ ಇರುವುದನ್ನು ನೋಡಿದ ಸ್ಥಳೀಯರು ಕೂಡಲೇ ಕ್ವಾರಿಯೊಳಗೆ ಹಗ್ಗ ಎಸೆದಿದ್ದಾರೆ. ಹಗ್ಗ ಹಿಡಿದುಕೊಂಡು ಆತ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ. ಪ್ರವೀಣಾ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಳು.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.