ದೊಡ್ಡಬಳ್ಳಾಪುರ, ಸೆ 16 (DaijiworldNews/DB): ವೃದ್ದೆಯೋರ್ವರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಲೆತ್ನಿಸಿದ ಕಳ್ಳಿಯೊಬ್ಬಳನ್ನು ಅಜ್ಜಿಯ ಸಮಯಪ್ರಜ್ಞೆಯಿಒಂದಾಗಿ ಗ್ರಾಮಸ್ಥರು ಪೊಲೀಸರಿಗೊಪ್ಪಿಸಿದ ಘಟನೆ ದೊಡ್ಡಬಳ್ಳಾಪುರದ ಕನಸವಾಡಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ನಂದಿನಿ ಪೊಲೀಸ್ ಅತಿಥಿಯಾದ ಸರಗಳ್ಳಿ. ಕನಸವಾಡಿ ಗ್ರಾಮದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ವೃದ್ದೆ ರಾಜಮ್ಮ ಎಂಬವರು ಬಸ್ಗಾಗಿ ಕಾಯುತ್ತಾ ನಿಂತಿದ್ದಾಗ ಅಲ್ಲಿಗೆ ಬಂದ ಮಹಿಳೆ ಆತ್ಮೀಯವಾಗಿ ಮಾತನಾಡಿದ್ದಾಳೆ. ಬಳಿಕ ವೃದ್ದೆಯ ಕತ್ತಿಗೆ ಏಕಾಏಕಿ ಕೈ ಹಾಕಿ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾಳೆ. ತಕ್ಷಣ ಸಮಯಪ್ರಜ್ಞೆ ಮೆರೆದ ವೃದ್ದೆ ಒಂದು ಕೈಯಲ್ಲಿ ಮಾಂಗಲ್ಯ ಸರ ಹಿಡಿದು, ಇನ್ನೊಂದು ಕೈಯಲ್ಲಿ ಕಳ್ಳಿಯನ್ನು ಹಿಡಿದು ಎರಡೇಟು ಬಿಗಿದು ಸ್ಥಳೀಯರನ್ನು ಕೂಗಿದ್ದಾರೆ. ತಕ್ಷಣ ಸ್ಥಳೀಯರೆಲ್ಲ ಸೇರಿ ಕಳ್ಳಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಈಕೆ ಬೆಳಗ್ಗಿನಿಂದ ವ್ಯಕ್ತಿಯೊಂದಿಗೆ ಬೈಕ್ನಲ್ಲಿ ತಿರುಗಾಡುತ್ತಿದ್ದು, ವೃದ್ದೆಯ ಸರ ಕಿತ್ತುಕೊಳ್ಳಲು ಬೈಕ್ನಲ್ಲೇ ಬಂದಿದ್ದಳು. ಆಕೆಯನ್ನು ಗ್ರಮಸ್ಥರು ಹಿಡಿಯುತ್ತಿದ್ದಂತೆ ಬೈಕ್ ಸವಾರ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸರಗಳ್ಳಿಯ ವಿರುದ್ದ ಪ್ರಕರಣ ದಾಖಲಾಗಿದೆ.