ಚಂಡೀಗಢ, ಸೆ 16 (DaijiworldNews/DB): ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ನೂತನ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವು ಸೆಪ್ಟಂಬರ್ 19 ರಂದು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದೆ.
ಕಾಂಗ್ರೆಸ್ ಪಕ್ಷದಲ್ಲಿದ್ದ ಅಮರಿಂದರ್ ಸಿಂಗ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಕ್ಕೆ ಆಕ್ರೋಶಗೊಂಡು ಕಳೆದ ವರ್ಷ ಕಾಂಗ್ರೆಸ್ನಿಂದ ಹೊರ ಬಂದಿದ್ದರು. ಬಳಿಕ ತಮ್ಮದೇ ಆದ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಇದೀಗ ಆ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಅಮರಿಂದರ್ ಸಿಂಗ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಇದೇ ವೇಳೆ ಪುತ್ರ ಚರಣ್ ಇಂದರ್ ಸಿಂಗ್, ಪುತ್ರಿ ಜೈ ಇಂದರ್ ಕೌರ್, ಮೊಮ್ಮಗ ನಿರ್ವಾನ್ ಸಿಂಗ್ ಸಹ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಸಿಂಗ್ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದು, ಲಂಡನ್ನಲ್ಲಿದ್ದಾರೆ.
ಅಮರಿಂದರ್ ಸಿಂಗ್ ಎರಡು ಬಾರಿ ಪಂಜಾಬ್ನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಕಳೆದ ವರ್ಷ ಅವರನ್ನು ಕಾಂಗ್ರೆಸ್ ಸಿಎಂ ಸ್ಥಾನದಿಂದ ಕೆಳಗಿಳಿಸಿತ್ತು. ಬಳಿಕ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದು, 2022ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ (ಸಂಯುಕ್ತ್) ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಆದರೆ ನೂತನ ಪಕ್ಷದ ಅಭ್ಯರ್ಥಿಗಳು ಶೂನ್ಯ ಗೆಲುವು ಸಾಧಿಸಿದ್ದರು. ಪಟಿಯಾಲಾ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಮರಿಂದರ್ ಸಿಂಗ್ ಕೂಡಾ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ.