ಬೆಂಗಳೂರು, ಸೆ 16 (DaijiworldNews/HR): ಬೆಂಗಳೂರಿನ ಗೋವಿಂದಪುರ ಠಾಣೆ ವ್ಯಾಪ್ತಿಯಲ್ಲಿ ಮನೆಯಲ್ಲಿ ನಾಯಿ ಸಾಕುವುದು ಬೇಡ ಎಂದು ಹೇಳಿದ್ದಕ್ಕೆ ಜಗಳವಾಡಿದ್ದರಿಂದ ನೊಂದ ಮಹಿಳೆ ತನ್ನ ಪುತ್ರಿಯನ್ನು ಕೊಂದು, ಬಳಿಕ ತಾನೂ ಆತ್ಮ ಹತ್ಯೆಮಾಡಿಕೊಂಡಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಮಗಳು ರಿದ್ಯಾಳನ್ನು(13) ಕೊಂದು ತಾಯಿ ದಿವ್ಯಾ(36) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಿದ್ಯಾಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಾಗ ಮನೆಯಲ್ಲಿ ನಾಯಿ, ಬೆಕ್ಕುಗಳು ಸಾಕುಬೇಡಿ, ನಾಯಿ ಸಾಕುವುದರಿಂದ ಉಸಿರಾಟದ ಸಮಸ್ಯೆ ಉಲ್ಬಣವಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದರು.
ಇನ್ನು ಈ ವಿಚಾರವನ್ನು ದಿವ್ಯಾ ಅವರು ತಮ್ಮ ಪತಿ ಶ್ರೀನಿವಾಸ್ ಮತ್ತು ಅತ್ತೆ-ಮಾವನಿಗೆ ತಿಳಿಸಿ, ನಾಯಿಯನ್ನು ಬೇರೆಯವರಿಗೆ ಕೊಡುವಂತೆ ತಿಳಿಸಿದ್ದಾರೆ. ಆದರೆ ಶ್ರೀನಿವಾಸ್ ಮತ್ತು ಅತ್ತೆ-ಮಾವ ಕೂಡ ಸರಿಯಾಗಿ ಸ್ಪಂದಿಸದೆ ಜಗಳ ಮಾಡಿದ್ದಾರೆ. ಹೀಗಾಗಿ ನೊಂದ ದಿವ್ಯಾ ಮನೆಯ ಕೋಣೆಯಲ್ಲಿ ಪುತ್ರಿ ರಿದ್ಯಾಳನ್ನು ಫ್ಯಾನ್ಗೆ ನೇಣುಬಿಗಿದುಕೊಂದು ಬಳಿಕ ತಾನೂ ಅದೇ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀನಿವಾಸ್ ಮರು ದಿನಗಳ ಬೆಳಗ್ಗೆ ಕೊಠಡಿಯ ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳದಲ್ಲಿ ಸಿಕ್ಕ ಡೆತ್ನೋಟ್ ಆಧಾರದ ಮೇಲೆ ಪತಿ ಶ್ರೀನಿವಾಸ್, ಅತ್ತೆ-ಮಾವನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿ ಪತಿ ಶ್ರೀನಿವಾಸನನ್ನು ಬಂಧಿಸಲಾಗಿದೆ.