ಕೇರಳ, ಸೆ 16 (DaijiworldNews/HR): ಭಾರತ್ ಜೋಡೋ ಯಾತ್ರೆಗೆ 2,000 ನಿಧಿಯನ್ನು ಪಾವತಿಸದಿದ್ದಕ್ಕಾಗಿ ತರಕಾರಿ ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಭಾಗಿಯಾಗಿರುವ ಪಕ್ಷದ ಮೂವರು ಕಾರ್ಯಕರ್ತರನ್ನು ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಅಮಾನತುಗೊಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುಧಾಕರನ್, ತರಕಾರಿ ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಕೊಲ್ಲಂನಲ್ಲಿ ಪಕ್ಷದ ಮೂವರು ಕಾರ್ಯಕರ್ತರನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ. ಅವರು ನಮ್ಮ ಸಿದ್ಧಾಂತವನ್ನು ಪ್ರತಿನಿಧಿಸುವುದಿಲ್ಲ ಮತ್ತು ಅಂತಹ ನಡವಳಿಕೆಯು ಅಕ್ಷಮ್ಯವಾಗಿದೆ ಎಂದಿದ್ದಾರೆ.
ಇನ್ನು ಇದಕ್ಕೂ ಮುನ್ನ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪ್ಯಾನ್ ಇಂಡಿಯಾ ಮೆರವಣಿಗೆಗೆ ದೇಣಿಗೆ ಮೊತ್ತದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ತರಕಾರಿ ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕಾಂಗ್ರೆಸ್ ಕಾರ್ಯಕರ್ತರ ಗುಂಪು ನಮ್ಮ ಅಂಗಡಿಗೆ ಬಂದು ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಕೇಳಿದ್ದಾರೆ ನಾನು 500 ರೂ ನೀಡಿದ್ದೇನೆ ಆದರೆ ಅವರು ರೂ 2,000 ಗೆ ಒತ್ತಾಯಿಸಿ, ಅಂಗಡಿಯ ತೂಕದ ಯಂತ್ರಗಳನ್ನು ಹಾನಿಗೊಳಿಸಿ ತರಕಾರಿಗಳನ್ನು ಎಸೆದಿದ್ದಾರೆ. ನಾವೇ ಜೀವನ ನಿರ್ವಹಣೆಗೆ ಪರದಾಡುತ್ತಿದ್ದೇವೆ, ಅವರು ಹಣ ಕೇಳುವ ಬದಲು ನಮಗೆ ಬೆಂಬಲ ನೀಡಬೇಕು ಎಂದು ಅಂಗಡಿ ಮಾಲೀಕ ಎಸ್ ಫವಾಜ್ ಹೇಳಿದ್ದಾರೆ.