ಪಂಜಾಬ್, ಸೆ 16 (DaijiworldNews/DB): ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ಸ್ಟರ್ ಮಂದೀಪ್ ಸಿಂಗ್ ತೂಫಾನ್ನ್ನು ಅಮೃತಸರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಜಂಡಿಯಾಲ ಗುರು ಗ್ರಾಮ ಮತ್ತು ತರ್ನ್ ತರನ್ ನಡುವೆ ಇರುವ ಖಾಖ್ ಗ್ರಾಮದ ಮಂದೀಪ್ ತೂಫಾನ್ನನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಈತನೊಂದಿಗೆ ಮನ್ಪ್ರೀತ್ ಸಿಂಗ್ ಅಲಿಯಾಸ್ ಮಣಿ ರೈಯಾ ಎಂಬಾತನನ್ನೂ ಅಜ್ನಾಲಾ ರಸ್ತೆಯ ಕುಕ್ಕಡವಾಲಾ ಗ್ರಾಮದಿಂದ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನೊಬ್ಬ ಆರೋಪಿ ರಂಜಿತ್ ಬಟಾಲ ಇದೇ ಪ್ರದೇಶದಲ್ಲಿ ವಾಸಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ.
ಜಂಡಿಯಾಲ ಗುರು ಸಮೀಪದ ಖಾಖ್ ಗ್ರಾಮದಲ್ಲಿ ಇಬ್ಬರು ಆರೋಪಿಗಳು ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಂಧವನ್ನು ಇನ್ನೂ ಪೊಲೀಸರು ಖಚಿತಪಡಿಸಿಲ್ಲ.
ಪಂಜಾಬ್ನ ಮನ್ಸಾದಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲರನ್ನು ಹತ್ಯೆ ಮಾಡಲಾಗಿತ್ತು. ಘಟನೆ ಸಂಬಂಧ ಈಗಾಗಲೇ ಹಲವರನ್ನು ಪೊಲೀಸರು ಬಂಧಿಸಿದ್ದು, ಕಳೆದ ಆರು ದಿನಗಳ ಹಿಂದೆ ತಲೆಮರೆಸಿಕೊಂಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ಶೂಟರ್ ದೀಪಕ್ ಅಲಿಯಾಸ್ ಮುಂಡಿ ಮತ್ತು ಇಬ್ಬರು ಸಹಚರರು ಆರು ದಿನಗಳ ಹಿಂದೆ ಬಂಧಿಸಲ್ಪಟ್ಟಿದ್ದರು. ಇದೀಗ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.