ನವದೆಹಲಿ, ಸೆ 16 (DaijiworldNews/MS): ಭಾರತದಲ್ಲಿ ಸುಮಾರು 70 ವರ್ಷಗಳ ಹಿಂದೆ ಅಳಿದು ಹೋಗಿದ್ದ ವನ್ಯಜೀವಿ ಚೀತಾವನ್ನು ಮರುಪರಿಚಯಿಸುವ ಕಾರ್ಯಕ್ರಮದ ಭಾಗವಾಗಿ ಸೆಪ್ಟೆಂಬರ್ 17 ರಂದು ಎಂಟು ಚೀತಾಗಳನ್ನು ಆಫ್ರಿಕಾದ ನಮೀಬಿಯಾದಿಂದ ತರಲಾಗುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಯೋಜನೆಯಡಿಯಲ್ಲಿ ನಮೀಬಿಯಾದಿಂದ ತರಲಾದ ಚೀತಾಗಳನ್ನು ಉದ್ಯಾಯನವನಕ್ಕೆ ಬಿಡಲಿದ್ದಾರೆ. ವಿಶೇಷವೆಂದರೆ ಇದು
ವಿಶ್ವದ ಮೊದಲ ಅಂತರ್-ಖಂಡಾಂತರ ದೊಡ್ಡ ಕಾಡು ಮಾಂಸಾಹಾರಿ ಪ್ರಾಣಿಗಳ ಸ್ಥಳಾಂತರ ಯೋಜನೆಯಾಗಿದೆ.
ಭಾರತಕ್ಕೆ ಆಗಮಿಸು ಎಂಟು ಚೀತಾಗಳ ಮೊದಲ ವೀಡಿಯೊ ಬಿಡುಗಡೆಯಾಗಿದ್ದು, ಅದರಲ್ಲಿ ಅವುಗಳು ನಮೀಬಿಯಾ ದೇಶದ ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿ ಸ್ವಚ್ಚಂಧವಾಗಿ ವಿಹರಿಸುತ್ತಿರುವುದು ಕಾಣಬಹುದಾಗಿದೆ. ಮರದ ಕೆಳಗೆ ಚೀತಾಗಳು ವಿಶ್ರಾಂತಿ ಪಡೆಯುತ್ತಿರುವುದನ್ನು ಒಂದು ನಿಮಿಷದ ವೀಡಿಯೊದಲ್ಲಿ ಒಳಗೊಂಡಿದೆ.
ಎಂಟು ಚೀತಾಗಳ ಪೈಕಿ ಐದು ಹೆಣ್ಣು ಮತ್ತು ಮೂರು ಗಂಡು ಚೀತಾ ಭಾರತಕ್ಕೆ ಸ್ಥಳಾಂತರಗೊಳ್ಳಲು ಸಿದ್ಧವಾಗಿವೆ. ಈ ಚಿರತೆಗಳನ್ನು ಖಾಲಿ ಹೊಟ್ಟೆಯಲ್ಲಿ ತರಲಾಗುತ್ತದೆ. ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಯಾಣಿಸುವಾಗ ಪ್ರಾಣಿ ತಜ್ಞರೂ ಜತೆಗಿರುತ್ತಾರೆ. ಚೀತಾಗಗಳಿಗೆ ಒಂದು ತಿಂಗಳ ಕಾಲ ಕ್ವಾರಂಟೈನ್ನಲ್ಲಿ ಇಡಲು ನಿರ್ಧರಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಭವಿಷ್ಯದಲ್ಲಿ ಇನ್ನಷ್ಟು ಚೀತಾಗಳು ಭಾರತಕ್ಕೆ ಸ್ಥಳಾಂತರವಾಗಲಿದೆ.