ಪಣಜಿ, ಸೆ 16 (DaijiworldNews/DB): ಬಿಜೆಪಿ ಸೇರ್ಪಡೆಯಾದ ಗೋವಾ ಕಾಂಗ್ರೆಸ್ ಶಾಸಕರಿಗೆ ತಲಾ 40-50 ಕೋಟಿ ರೂ. ಆಮಿಷವೊಡ್ಡಿ ಪಕ್ಷಾಂತರ ಮಾಡಿಸಲಾಗಿದೆ ಎಂದು ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಪಣಜಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟ್ಯಾಂತರ ರೂಪಾಯಿ ಆಮಿಷವೊಡ್ಡಿಕಾಂಗ್ರೆಸ್ ಶಾಸಕರನ್ನು ಬೆಜೆಪಿ ಸೆಳೆದುಕೊಂಡಿದೆ. ಅಥವಾ ಅವರಿಗೆ ಕೇಂದ್ರೀಯ ಸಂಸ್ಥೆಗಳ ಭಯವೂ ಕಾಡಿರಬಹುದು. ಎಲ್ಲಾ ಕಡೆಯೂ ಬಿಜೆಪಿ ಇಂತಹ ಕೆಲಸ ಮಾಡುತ್ತಿದೆ. ಶಾಸಕರನ್ನು ಸೆಳೆಯಲು ಅವರಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದೇ ಪ್ರಶ್ನೆಯಾಗಿದೆ. ಚುನಾಯಿತ ಪ್ರತಿನಿಧಿಗಳನ್ನು ವಿಭಜಿಸುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಳ್ಳುವಲ್ಲಿ ಬಿಜೆಪಿ ನಿರತವಾಗಿದೆ ಎಂದು ದೂರಿದರು.
ಇನ್ನು ಕಾಂಗ್ರೆಸ್ ಮಾಡಿರುವ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಗೋವಾದ ಅಭಿವೃದ್ದಿಯಿಂದ ಪ್ರೇರಿತರಾಗಿ ಎಂಟು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆಯೇ ಹೊರತು ಅವರಿಗೆ ಹಣದ ಆಮಿಷವನ್ನು ಒಡ್ಡಿಲ್ಲ ಎಂದು ಬಿಜೆಪಿ ತಿಳಿಸಿದೆ.
ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಸೇರಿದಂತೆ ಎಂಟು ಮಂದಿ ಕಾಂಗ್ರೆಸ್ ಶಾಸಕರು ಬುಧವಾರ ಬಿಜೆಪಿ ಸೇರ್ಪಡೆಗೊಂಡಿದ್ದು, ಸದ್ಯ 11 ಮಂದಿ ಕಾಂಗ್ರೆಸ್ ಶಾಸಕರ ಪೈಕಿ ಗೋವಾ ವಿಧಾನಸಭೆಯಲ್ಲಿ ಮೂವರು ಕಾಂಗ್ರೆಸ್ ಶಾಸಕರಿದ್ದಾರೆ.