ನವದೆಹಲಿ, ಸೆ 16 (DaijiworldNews/DB): ಆಮ್ ಆದ್ಮಿ ಪಕ್ಷದ ಮಾನ್ಯತೆ ರದ್ದು ಮಾಡುವಂತೆ ಕೋರಿ 56 ಮಂದಿ ನಿವೃತ್ತ ಅಧಿಕಾರಿಗಳು ಕೇಂದ್ರ ಚುನಾವಣಾ ಆಯೋಗದ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ನಿವೃತ್ತ ಐಎಎಸ್, ಐಎಫ್ಎಸ್, ಐಪಿಎಸ್ ಮತ್ತು ಐಆರ್ಎಸ್ ಅಧಿಕಾರಿಗಳು ಗುರುವಾರ ಈ ಪತ್ರವನ್ನು ಬರೆದಿದ್ದು, ಗುಜರಾತ್ ಚುನಾವಣೆಯಲ್ಲಿ ತಮ್ಮ ಪರವಾಗಿ ಕೆಲಸ ಮಾಡುವಂತೆ ಸಾರ್ವಜನಿಕ ಸೇವಾನಿರತ ಅಧಿಕಾರಿಗಳನ್ನು ಆಮ್ ಆದ್ಮಿ ಪಕ್ಷವು ಒತ್ತಡ ಹೇರುತ್ತಿದೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಮದನ್ ಗೋಪಾಲ್, ಕೇರಳದ ನಿವೃತ್ತ ಮುಖ್ಯ ಕಾರ್ಯದರ್ಶಿ ಆನಂದ್ ಬೋಸ್, ನಿವೃತ್ತ ರಾಯಭಾರಿ ನಿರಂಜನ್ ದೇಸಾಯಿ, ಆಂಧ್ರಪ್ರದೇಶದ ನಿವೃತ್ತ ಡಿಜಿಪಿ ಉಮೇಶ್ ಕುಮಾರ್ ಸೇರಿದಂತೆ ಹಲವು ನಿವೃತ್ತ ಅಧಿಕಾರಿಗಳು ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಕೋಟ್ನಲ್ಲಿ ಸೆಪ್ಟೆಂಬರ್ 3ರಂದು ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಲು ಎಎಪಿಯೊಂದಿಗೆ ಗುಜರಾತ್ನ ಅಧಿಕಾರಿಗಳು ಕೆಲಸ ಮಾಡಬೇಕು ಎಂದಿರುವ ಮಾತುಗಳನ್ನು ಸಹ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಸಾರ್ವಜನಿಕ ಕೆಲಸದಲ್ಲಿ ತೊಡಗಿರುವ ಅಧಿಕಾರಿಗಳನ್ನು ಪಕ್ಷದ ಪರ ಕೆಲಸ ಮಾಡುವಂತೆ ಒತ್ತಾಯಿಸುವುದು ಸರಿಯಲ್ಲ. ಇದು ರಾಜಕೀಯ ಲಾಭಕ್ಕಾಗಿಯೇ ಹೊರತು ಆಕಸ್ಮಿಕವಾಗಿ ಆದ ಲೋಪವಲ್ಲ. ಸಾರ್ವಜನಿಕ ಸೇವೆಯಲ್ಲಿರುವವರು ಯಾವುದೇ ರಾಜಕೀಯ ಪಕ್ಷಗಳ ನಿಷ್ಠರಲ್ಲ ಎಂಬುದನ್ನು ಎಎಪಿ ಅರ್ಥೈಸಿಕೊಂಡಿಲ್ಲ ಎಂದು ನಿವೃತ್ತ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿರುವವರನ್ನು ಪಕ್ಷದ ಪರ ಕೆಲಸ ಮಾಡುವಂತೆ ಹೇಳುವ ಮೂಲಕ ಎಎಪಿಯು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ. ಪ್ರಜಾಪ್ರತಿನಿಧಿ ಕಾಯಿದೆ- 1951 ರ ನಿಬಂಧನೆಗಳ ಉಲ್ಲಂಘನೆಯೂ ಇಲ್ಲಿ ಆಗಿದೆ. ಹೀಗಾಗಿ ಆ ಪಕ್ಷದ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ನಿವೃತ್ತ ಅಧಿಕಾರಿಗಳು ಚುನಾವಣಾ ಆಯೋಗದ ಆಯುಕ್ತರನ್ನು ಒತ್ತಾಯಿಸಿದ್ದಾರೆ.