ಬಿಹಾರ, ಸೆ 16 (DaijiworldNews/MS): ಮೊಬೈಲ್ ಕಳ್ಳತನ ಮಾಡಲು ಹೋಗಿ ಕಳ್ಳನೋರ್ವ ವಿಚಿತ್ರವಾಗಿ ಸಿಕ್ಕಿಬಿದ್ದಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಈ ಖತರ್ನಾಕ್ ಕಳ್ಳ, ಕಿಟಕಿಯ ಮೂಲಕ ರೈಲು ಪ್ರಯಾಣಿಕರಿಂದ ಮೊಬೈಲ್ ಫೋನ್ ಅನ್ನು ಕಸಿದುಕೊಳ್ಳಲು ಪ್ರಯತ್ನಿದ್ದಾನೆ. ಆದರೆ ಈ ವೇಳೆ ಕಳ್ಳನ ಅದೃಷ್ಟ ಕೈಕೊಟ್ಟು ರೈಲಿನೊಂದಿಗೆ ನೇತಾಡುತ್ತಾ ಪ್ರಯಾಣಿಸುವ ಸ್ಥಿತಿ ಇವನದಾಗಿತ್ತು.
ಸೆಪ್ಟೆಂಬರ್ 14 ರಂದು ಬಿಹಾರದಲ್ಲಿ ಈ ಘಟನೆ ನಡೆದಿದ್ದು, ಈ ರೈಲು ಬೇಗುಸರಾಯ್ನಿಂದ ಖಗರಿಯಾಗೆ ಸಂಚರಿಸುತ್ತಿತ್ತು. ಸಾಹೇಬ್ಪುರ ಕಮಲ್ ನಿಲ್ದಾಣದ ಬಳಿ ನಿಲುಗಡೆಯ ಬಳಿಕ ರೈಲು ಸಂಚರಿಸಲು ಪ್ರಾರಂಭಿಸಿದಾಗ ಕಳ್ಳ ಪ್ರಯಾಣಿಕನ ಮೊಬೈಲ್ ಎಗರಿಸಲು ನೋಡಿದಾಗ ಎಚ್ಚತ್ತ ಪ್ರಯಾಣಿಕ ಕಳ್ಳನ ಕೈ ಗಟ್ಟಿ ಹಿಡಿದ ಪರಿಣಾಮ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ರೈಲು ತನ್ನ ವೇಗವನ್ನು ಹೆಚ್ಚಿಸಿದ್ದು, ರೈಲಿನಲ್ಲಿದ್ದವರು ಆತ ಬೀಳದಂತೆ ಆತನ ತೋಳುಗಳನ್ನು ಪ್ರಯಾಣಿಕರು ಗಟ್ಟಿಯಾಗಿ ಹಿಡಿದುಕೊಂಡು ಆತನಿಗೆ ಬೈಯುತ್ತಾ ಬಂದಿದ್ದಾರೆ. ಆತ ಸುಮಾರು ೧೦ ಕಿ.ಮೀ ದೂರದ ಮುಂದಿನ ನಿಲ್ದಾಣದವರೆಗೆ ಕಿಟಕಿಯಲ್ಲಿ ನೇತಾಡುತ್ತಾ ಬಂದಿದ್ದಾನೆ.
ಅಂತಿಮವಾಗಿ ರೈಲು ಖಗಾರಿಯಾ ನಿಲ್ದಾಣಕ್ಕೆ ಬಂದಾಗ ಆತನ ಕೈ ಬಿಟ್ಟಿದ್ದಾರೆ. ಈ ವೇಳೆ ಆತ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಈತನ ವಿರುದ್ದ ಪೊಲೀಸರು ಕ್ರಮ ಕೈಗೊಂಡಿದ್ದಾರೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.