ನವದೆಹಲಿ, ಸೆ 16 (DaijiworldNews/HR): ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದಾಗಿ ಭಾರತಕ್ಕೆ ಹಿಂದಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಲ್ಲಿನ ಕಾಲೇಜುಗಳಲ್ಲಿ ಪ್ರವೇಶ ನೀಡುವುದು ಕಷ್ಟಸಾಧ್ಯ ಎಂದು ಕೇಂದ್ರ ಸರಕಾರವು ಸುಪ್ರೀಂಕೋರ್ಟ್ಗೆ ಹೇಳಿರುವುದಾಗಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್ಎಂಸಿ)ವೂ ಇದುವರೆಗೆ ವಿದೇಶಿ ವೈದ್ಯಕೀಯ ಕಾಲೇಜುಗಳಲ್ಲಿ ಕಲಿತವರಿಗೆ ಇಲ್ಲಿನ ಕಾಲೇಜುಗಳಲ್ಲಿ ಪ್ರವೇಶ ನೀಡಲು ಒಪ್ಪಿಗೆ ನೀಡಿಲ್ಲ ಎಂದು ಕೇಂದ್ರ ಸರಕಾರವು ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಇನ್ನು ತಮಗೂ ಇಲ್ಲಿನ ಕಾಲೇಜುಗಳಲ್ಲಿ ಪ್ರವೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಮೊದಲ ಮತ್ತು ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ಇಲ್ಲಿನ ಕಾಲೇಜುಗಳಲ್ಲಿ ದಾಖಲಿಸಿಕೊಳ್ಳಬೇಕು. ಅಲ್ಲಿ ಯಾವ ಸೆಮಿಸ್ಟರ್ನಲ್ಲಿ ಕಲಿಯುತ್ತಿದ್ದರೋ ಅದೇ ಸೆಮಿಸ್ಟರ್ ನಲ್ಲಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ, ನಮ್ಮ ವಿದ್ಯಾರ್ಥಿಗಳ ಕಳವಳ ಅರ್ಥವಾಗುತ್ತದೆ. ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ 1956ರಂತೆ ಯಾವುದೇ ವಿದೇಶಿ ವೈದ್ಯಕೀಯ ಕಾಲೇಜಿನಿಂದ ಇಲ್ಲಿಗೆ ವಿದ್ಯಾರ್ಥಿಗಳನ್ನು ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ. ವಿದೇಶಾಂಗ ಇಲಾಖೆ ಜತೆಗೆ ಚರ್ಚಿಸಿ ಈ ವಿದ್ಯಾರ್ಥಿಗಳನ್ನು ಬೇರೆ ದೇಶಗಳಲ್ಲಿ ಕೋರ್ಸ್ ಮುಗಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದಿದೆ.