ಜಮ್ಮು, ಸೆ 15 (DaijiworldNews/DB): ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಬಸ್ ಪ್ರಪಾತಕ್ಕೆ ಉರುಳಿ ಬಿದ್ದು ಆರು ಮಂದಿ ಮೃತಪಟ್ಟ ಘಟನೆ ನಡೆದಿದೆ. 25 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಜಮ್ಮುವಿನಿಂದ ಪೂಂಚ್ಗೆ ತೆರಳುತ್ತಿದ್ದ ಬಸ್ ರಜೌರಿಯಲ್ಲಿ ಪ್ರಪಾತಕ್ಕೆ ಉರುಳಿದೆ. ರಜೌರಿಯ ಮಂಜಕೋಟೆ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೇನೆ, ಪೊಲೀಸರು, ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಐದು ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಜೌರಿ ರಸ್ತೆ ಅಪಘಾತದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಎರಡನೇ ಅಪಘಾತ ಇದಾಗಿದೆ. ನಿನ್ನೆ ಪೂಂಚ್ ನಲ್ಲಿ ಬಸ್ಸೊಂದು ಕಂದಕಕ್ಕೆ ಬಿದ್ದು 12 ಮಂದಿ ಮೃತಪಟ್ಟಿದ್ದರು.