ಲಖಿಂಪುರ ಖೇರಿ, ಸೆ 15 (DaijiworldNews/DB): ಉತ್ತರ ಪ್ರದೇಶ ಲಖಿಂಪುರ ಖೇರಿಯಲ್ಲಿ ದಲಿತ ಬಾಲಕಿಯರಿಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಪ್ರಕರಣದ ಮರಣೋತ್ತರ ವರದಿ ಬಹಿರಂಗಗೊಂಡಿದ್ದು, ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ, ಕತ್ತು ಹಿಸುಕಿ ಕೊಂದಿರುವುದು ಖಚಿತಗೊಂಡಿದೆ.
15 ಮತ್ತು 17 ವರ್ಷದ ಸಹೋದರಿಯರಿಬ್ಬರ ಮೃತದೇಹಗಳು ನಿಘಾಸನ್ ಪ್ರದೇಶದ ಹಳ್ಳಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಬಾಲಕಿಯರ ತಾಯಿ ನೀಡಿದ ದೂರಿನ ಮೇರೆಗೆ ಚೋಟು, ಜುನೈದ್, ಸೊಹೈಲ್, ಹಫೀಜುಲ್, ಕರೀಮುದ್ದೀನ್, ಆರಿಫ್ ಎಂಬ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಮೂವರು ತಮ್ಮ ಮಕ್ಕಳನ್ನು ಬೈಕ್ನಲ್ಲಿ ಅಪಹರಿಸಿದ್ದರು ಎಂದು ಬಾಲಕಿಯರ ಪೋಷಕರು ಆಪಾದಿಸಿದ್ದರು. ಆದರೆ ಪೊಲೀಸರ ವಿಚಾರಣೆ ವೇಲೆ ಬಾಲಕಿಯರಿಗೆ ಆರೋಪಿಗಳ ಜೊತೆಗೆ ಸ್ನೇಹವಿದ್ದು, ಸ್ವ ಇಚ್ಚೆಯಿಂದಲೇ ಅವರೊಂದಿಗೆ ಬೈಕ್ನಲ್ಲಿ ತೆರಳಿದ್ದರು ಎಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಈ ನಡುವೆ ಆರೋಪಿಗಳ ಕುಟುಂಬ ಸದಸ್ಯರು ತಮ್ಮ ಮಕ್ಕಳು ರೇಷನ್ ತರಲೆಂದು ಹೊರ ಹೋಗಿದ್ದರು ಎಂದು ಹೇಳಿರುವುದಾಗಿ ತಿಳಿದು ಬಂದಿದೆ.
ಇದೀಗ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರ ಮೇಲೆ ಅತ್ಯಾಚಾರ ನಡೆಸಿ ಬಳಿಕ ಕತ್ತು ಹಿಸುಕಿ ಕೊಂದಿರುವುದು ದೃಢಪಟ್ಟಿದೆ. ವರದಿ ಬಂದ ಬಳಿಕ ಮೃತದೇಹಗಳನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.