ನವದೆಹಲಿ, ಸೆ 15 (DaijiworldNews/HR): ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಸ್ಟಿಂಗ್ ವಿಡಿಯೋವನ್ನು ಬಿಜಿಪಿ ಹಂಚಿಕೊಂಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ವಿಡಿಯೋದಲ್ಲಿರುವುದು ಸತ್ಯವಾಗಿದ್ರೆ ನನ್ನನ್ನು ಬಂಧಿಸಿ ಎಂದು ಸವಾಲೆಸೆದಿದ್ದಾರೆ.
ಬಿಜೆಪಿಯವರು ಮದ್ಯ ಹಗರಣದ ವಿಡಿಯೋವನ್ನು ಇಂದು ಪ್ರದರ್ಶಿಸಿದ್ದು, ಇದರಲ್ಲಿ ಹಗರಣ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಅಮಿತ್ ಅರೋರಾ, ದೆಹಲಿಯ ಎಎಪಿ ಸರ್ಕಾರವು ಉದ್ದೇಶಪೂರ್ವಕವಾಗಿ ಸಣ್ಣ ವ್ಯಾಪಾರಿಗಳನ್ನು ತನ್ನ ದರ್ಜೆ ನಿರ್ಮಿತ ಅಬಕಾರಿ ನೀತಿಯಿಂದ ದೂರವಿಟ್ಟು ಕೆಲವು ವ್ಯಕ್ತಿಗಳಿಗೆ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಹೊಂದಲು ಸಹಾಯ ಮಾಡಿದೆ ಎಂದು ಹೇಳುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮನೀಶ್ ಸಿಸೋಡಿಯಾ, ತನಿಖಾ ಸಂಸ್ಥೆಯು ಬಿಜೆಪಿಯ ವಿಸ್ತೃತ ಘಟಕದಂತೆ ವರ್ತಿಸುತ್ತಿರುವುದರಿಂದ ಬಿಜೆಪಿ ಈ ವಿಡಿಯೋವನ್ನು ಸಿಬಿಐಗೆ ಸಲ್ಲಿಸಬೇಕು. ಸಿಬಿಐ ನನ್ನ ನಿವಾಸದ ಮೇಲೆ ದಾಳಿ ಮಾಡಿ ನನ್ನ ಲಾಕರ್ ಅನ್ನು ಪರಿಶೀಲಿಸಿದೆ. ಆದರೆ ಅವರಿಗೆ ಏನೂ ಸಿಕ್ಕಿಲ್ಲ. ಇದು ನಿಜವೆಂದು ಕಂಡುಬಂದರೆ ನಾಲ್ಕು ದಿನಗಳಲ್ಲಿ ನನ್ನನ್ನು ಬಂಧಿಸಬೇಕು. ಬಂಧಿಸದಿದ್ದರೆ, ನಂತರ ಈ ವಿಡಿಯೋ ನಕಲಿ ಎಂದು ಒಪ್ಪಿಕೊಳ್ಳಬೇಕು ಎಂದಿದ್ದಾರೆ.