ನವದೆಹಲಿ, ಸೆ 15 (DaijiworldNews/DB): ಅತ್ಯಾಚಾರ ಆರೋಪಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿ ಅವರನ್ನು ಗೌರವಿಸುವ ಮಂದಿಯಿಂದ ಮಹಿಳಾ ಸುರಕ್ಷತೆ ನಿರೀಕ್ಷಿಸುವುದು ಅಸಾಧ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಲ್ಲಿ ಅಪ್ರಾಪ್ತ ದಲಿತ ಸಹೋದರಿಯರಿಬ್ಬರನ್ನು ಅಪಹರಿಸಿ ಹತ್ಯೆಗೈದ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಇದೊಂದು ಕಳವಳಕಾರಿ ಘಟನೆಯಾಗಿದೆ. ದೇಶದಲ್ಲಿ ಹೆಣ್ಣು ಮಕ್ಕಳಿಗೆ ಜೀವಿಸಲು ಸುರಕ್ಷಿತ ತಾಣ ಮಾಡಬೇಕಾದ ತುರ್ತು ಅಗತ್ಯವಿದೆ. ಆದರೆ ಅತ್ಯಾಚಾರ ಆರೋಪಿಗಳನ್ನು ಬಿಡುಗಡೆ ಮಾಡಿ ಅವರನ್ನು ಗೌರವಿಸುವವರಿಂದ ಮಹಿಳಾ ಸುರಕ್ಷತೆ ನಿರೀಕ್ಷಿಸುವುದು ಅಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಗಲಭೆಯಲ್ಲಿ 2002ರಲ್ಲಿ ಬಿಲ್ಕಿಸ್ ಬಾನು ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಕಳೆದ ತಿಂಗಳು ಗುಜರಾತ್ ಸರ್ಕಾರ ಬಿಡುಗಡೆಗೊಳಿಸಿತ್ತು. ಸನ್ನಡತೆಯ ಆಧಾರದ ಮೇಲೆ ಕ್ಷಮಾದಾನ ನೀಡಿ ಅವರನ್ನು ಬಿಡುಗಡೆ ಮಾಡಲಾಗಿತ್ತು.