ತೆಲಂಗಾಣ, ಸೆ 15 (DaijiworldNews/HR): ಒಮ್ಮಿಂದೊಮ್ಮೆಲೆ ಮನೆಯೊಳಗೆ ನುಗ್ಗಿದ ದೈತ್ಯ ರೂಪದ ಕೋತಿಯನ್ನು ನೋಡಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಹನುಮಂತ ನಗರದಲ್ಲಿ ನಡೆದಿದೆ.
ಮೃತರನ್ನು ರಾಜು ಎಂದು ಗುರುತಿಸಲಾಗಿದೆ.
ರಾಜು ಅವರ ಪತ್ನಿ ಮನೆಯ ಹೊರಗಿನ ಬಾಗಿಲು ತೆರೆದಿಟ್ಟು ನೀರು ತುಂಬಲು ಹೋಗಿದ್ದು, ಈ ವೇಳೆ ಕೋತಿ ಮನೆಯೊಳಗೆ ನುಗ್ಗಿದೆ. ನೀರು ತುಂಬಿಕೊಂಡು ಬಂದ ರಾಜು ಅವರ ಪತ್ನಿ ಅದನ್ನ ನೋಡಿ ಗಾಬರಿಯಿಂದ ಕೂಗಿದ್ದಾರೆ. ಅಲ್ಲೇ ಮಲಗಿದ್ದ ರಾಜು ಎದ್ದು ನೋಡಿದಾಗ ಕೋತಿ ಅವರ ಎದುರೇ ಕೂತಿದ್ದು ಅದನ್ನು ನೋಡಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇನ್ನು ರಾಜು ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರೊಳಗಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.
ಹನುಮಂತ ನಗರ ಪ್ರದೇಶದಲ್ಲಿ ಸಾಕಷ್ಟು ದಿನಗಳಿಂದ ಮಂಗಗಳ ಕಾಟ ಹೆಚ್ಚಾಗಿದ್ದು, ಅವು ಮನೆಗಳಿಗೆ ನುಗ್ಗಿ ಜನರ ಮೇಲೆ ದಾಳಿ ಮಾಡುವುದು, ವಸ್ತುಗಳನ್ನ ಎತ್ತಿಕೊಂಡು ಹೋಗುತ್ತಿದ್ದು, ಈ ಬಗ್ಗೆ ಸ್ಥಳೀಯರು ಪೌರಾಯುಕ್ತರಿಗೆ ದೂರನ್ನ ಕೊಟ್ಟಿದ್ದಾರೆ. ಈಗಾಗಲೇ ಮಂಗಗಳನ್ನ ಹಿಡಿಯುವವರನ್ನ ನೇಮಿಸಲೆಂದೇ ಹತ್ತು ಲಕ್ಷ ಮಂಜೂರು ಮಾಡಲಾಗಿದೆ.