ನವದೆಹಲಿ, ಸೆ 15 (DaijiworldNews/MS): ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿರುವ ಮುಸ್ಲಿಮರಿಗೆ, ಭಾರತದ ವಿರುದ್ಧ ದಾಳಿ ನಡೆಸಲು ಒಂದಾಗುವಂತೆ "ಇಸ್ಲಾಮಿಕ್ ಸ್ಟೇಟ್" ಕರೆ ನೀಡಿದೆ. ಈ ಬಗ್ಗೆ ಐಸಿಸ್ ಗುಂಪಿನ ಜಾಗತಿಕ ವಕ್ತಾರ ಮಂಗಳವಾರ ತಡರಾತ್ರಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಅಬು ಉಮರ್ ಅಲ್-ಮುಜಾಹಿರ್ ಎಂಬ ರಹಸ್ಯ ನಾಮಧೇಯ ಹೊಂದಿರುವ ಐಸಿಸ್ ವಕ್ತಾರನು, "ಇಸ್ಲಾಮಿಕ್ ಸ್ಟೇಟ್ " ಭಾರತದಲ್ಲಿ ಇಸ್ಲಾಂ ಧರ್ಮವನ್ನು ರಕ್ಷಿಸಲು ಬದ್ಧವಾಗಿದೆ ಅಲ್ಲಿನ ಮುಸ್ಲಿಮರು ಸರ್ಕಾರದಿಂದ ದಾಳಿಗೆ ಒಳಗಾಗಿದ್ದಾರೆ" ಎಂದು ಆರೋಪಿಸಿದೆ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಫಿಲಿಪೈನ್ಸ್, ಮಲೇಷಿಯಾ, ಇಂಡೋನೇಷ್ಯಾ, ಸಿಂಗಾಪುರ ದೇಶಗಳ ಮುಸ್ಲಿಮರನ್ನು ಉದ್ದೇಶಿಸಿ 32 ನಿಮಿಷಗಳ ಅರೇಬಿಕ್ ಭಾಷೆಯ ಭಾಷಣದಲ್ಲಿ ಅಲ್-ಮುಜಾಹಿರ್ "ಭಯವು ನಿಮ್ಮನ್ನು ತಿನ್ನುತ್ತದೆ ಆದ್ದರಿಂದ ನಿಮ್ಮ ಧರ್ಮದ ಪರವಾಗಿ ನಿಲ್ಲುವ ಮತ್ತು ಅದರ ಶತ್ರುಗಳ ವಿರುದ್ಧ ಹೋರಾಡುವ ಧೈರ್ಯವನ್ನು ನೀವು ಕಳೆದುಕೊಂಡಿದ್ದೀರಿ" ಎಂದು ಹೇಳಿದ್ದಾನೆ.
ಭಾಷಣದ ಸ್ವಲ್ಪ ಸಮಯದ ಮೊದಲು ಬಿಡುಗಡೆಯಾದ ಪ್ರತ್ಯೇಕ ವೀಡಿಯೊದಲ್ಲಿ ಇಸ್ಲಾಮಿಕ್ ಸ್ಟೇಟ್ ಜಿಹಾದಿಗಳು ಕುರ್ದಿಶ್ ಸೇನಾಪಡೆಗಳನ್ನು ಗಲ್ಲಿಗೇರಿಸುವುದನ್ನು ತೋರಿಸಿದೆ.