ಲಖ್ನೋ, ಸೆ 15 (DaijiworldNews/DB): ಸುಳ್ಳು ಜಾಹೀರಾತುಗಳಿಂದ ಕಾನೂನು, ಸುವ್ಯವಸ್ಥೆ ಸುಧಾರಣೆ ಕಾಣುವುದಿಲ್ಲ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಲು ಕಾರಣವೇನು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಯೋಗಿ ಆದಿತ್ಯನಾಥ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಲಖಿಂಪುರ ಖೇರಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯ ಮೃತದೇಹ ಪತ್ತೆಯಾದ ವರದಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮಾಧ್ಯಮಗಳಲ್ಲಿ ಸುಳ್ಳು ಜಾಹೀರಾತು ನೀಡುವುದರಿಂದ ಕಾನೂನು, ಸುವ್ಯವಸ್ಥೆ ಸುಧಾರಿಸುವುದಿಲ್ಲ ಎಂದು ಟೀಕಿಸಿದ್ದಾರೆ.
ಲಖಿಂಪುರದ ಖೇರಿಯಲ್ಲಿ ಬಾಲಕಿಯರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಅವರ ಸಂಬಂಧಿಕರು ಹೇಳುವ ಪ್ರಕಾರ ಹಗಲು ಹೊತ್ತಿನಲ್ಲೇ ಇಬ್ಬರು ಬಾಲಕಿಯರನ್ನು ಅಪಹರಣ ಮಾಡಲಾಗಿದೆ ಎನ್ನುತ್ತಿದ್ದಾರೆ. ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದೇಕೆ? ಸರ್ಕಾರ ಎಚ್ಚೆತ್ತುಕೊಳ್ಳುವುದು ಯಾವಾಗ ಎಂದವರು ಇದೇ ವೇಳೆ ಪ್ರಶ್ನಿಸಿದರು.