ಉತ್ತರ ಪ್ರದೇಶ, ಸೆ 15 (DaijiworldNews/DB): ನಿಲ್ಲಿಸಿದ್ದ ಟ್ರ್ಯಾಕ್ಟರ್ಗೆ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಲಕ್ನೋ-ದೆಹಲಿ ಹೆದ್ದಾರಿಯ ಸೀತಾಪುರ ಜಿಲ್ಲೆಯ ಸಿದ್ಧೌಲಿ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದಿದೆ. ಘಟನೆಯಲ್ಲಿ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಗುವಿನ ಹೆಸರಿನಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಶಹಜಹಾನ್ಪುರ ರೌಜಾ ಎಂಬಲ್ಲಿಂದ ಬಾರಾಬಂಕಿ ಜಿಲ್ಲೆಯ ದೇವಾ ಷರೀಫ್ ದೇಗುಲಕ್ಕೆ 35ಕ್ಕೂ ಹೆಚ್ಚು ಮಂದಿ ಟ್ರ್ಯಾಕ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು. ಭಾರೀ ಮಳೆಯಿಂದಾಗಿ ರಸ್ತೆ ಸರಿಯಾಗಿ ಗೋಚರಿಸದ ಪರಿಣಾಮ ಟ್ರಾಕ್ಟರ್ ಚಾಲಕ ರಸ್ತೆ ಬದಿ ವಾಹನವನ್ನು ನಿಲ್ಲಿಸಿದ್ದ. ಈ ವೇಳೆ ವೇಗವಾಗಿ ಬಂದ ಟ್ರಕ್ವೊಂದು ನಿಲ್ಲಿಸಿದ ಟ್ರಾಕ್ಟರ್ಗೆ ಗುದ್ದಿದೆ. ಇದರಿಂದಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಲಕ್ನೋದ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿರುವುದಾಇ ತಿಳಿದು ಬಂದಿದೆ.
ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಬಳಿಕ ಕ್ರೇನ್ ಬಳಸಿ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.