ಹೈದರಬಾದ್, ಸೆ 15 (DaijiworldNews/MS): ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಆಂಧ್ರಪ್ರದೇಶದ ಮಾಜಿ ಸಂಸದೆ ಕೊತಪಲ್ಲಿ ಗೀತಾ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ನಿನ್ನೆ ರಾತ್ರಿ ಬಂಧಿಸಿದೆ. ಗೀತಾ ಮಾತ್ರವಲ್ಲದೆ ಅವರ ಪತಿ ರಾಮಕೋಟೇಶ್ವರ ರಾವ್ ಮತ್ತು ಇತರ ಇಬ್ಬರನ್ನು ಅರೆಸ್ಟ್ ಮಾಡಿದೆ.
ಮಾಜಿ ಸಂಸದೆ ಹಾಗೂ ರಾಮಕೋಟೇಶ್ವರ ರಾವ್ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) ₹ 42 ಕೋಟಿ ವಂಚಿಸಿದ್ದಾರೆ ಎಂದು ಸಿಬಿಐ 2015 ರಲ್ಲಿ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ತಿಳಿಸಿತ್ತು.
ವಿಶ್ವೇಶ್ವರ ಇನ್ಫ್ರಾಸ್ಟ್ರಕ್ಚರ್ ವ್ಯವಸ್ಥಾಪಕ ನಿರ್ದೇಶಕ ರಾಮಕೋಟೇಶ್ವರ ರಾವ್ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿದ ₹ 25 ಕೋಟಿ ಸಾಲವನ್ನು ಪಡೆದಿದ್ದು, ಇದರ ಮರುಪಾವತಿ ಮಾಡದ ಹಿನ್ನಲೆ ಸಾಲದ ಮೊತ್ತವು ₹ 42 ಕೋಟಿಗೆ ಏರಿತ್ತು.
ಬ್ಯಾಂಕ್ ನೀಡಿದ ದೂರಿನ ಮೇರೆಗೆ, ಸಿಬಿಐ ರಾವ್ ಅವರನ್ನು ವಿಚಾರಣೆ ನಡೆಸಿ 2015 ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಮಾಜಿ ಸಂಸದೆ ಗೀತಾ ಅವರು ಕಂಪನಿಯಿಂದ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿರುವುದು ಕಂಡುಬಂದಿತ್ತು.
ಸಿಬಿಐ ಹೈದರಾಬಾದ್ನಲ್ಲಿ ಬಂಧಿಸಿದ ನಂತರ, ಗೀತಾ ಅವರನ್ನು ಬೆಂಗಳೂರಿಗೆ ಕರೆದೊಯ್ದಿದೆ. ಗೀತಾ ಅವರು 2014 ರಲ್ಲಿ ವೈಎಸ್ಆರ್ ಕಾಂಗ್ರೆಸ್ ಟಿಕೆಟ್ನಲ್ಲಿ ಪರಿಶಿಷ್ಟ ಪಂಗಡಗಳಿಗೆ (ಎಸ್ಟಿ) ಮೀಸಲಾಗಿದ್ದ ಅರಕು ಸಂಸದೀಯ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಆದರೆ ಗೀತಾ ಎಸ್ಟಿ ಸಮುದಾಯಕ್ಕೆ ಸೇರದ ಕಾರಣ ಅವರ ಮೇಲೆ ವಂಚನೆಯ ಆರೋಪ ಹೊರಿಸಲಾಯಿತು. ಅವರು 2019 ರಲ್ಲಿ ಬಿಜೆಪಿ ಸೇರಿದ್ದರು.