ಶಹಜಹಾನ್ಪುರ ( ಉತ್ತರ ಪ್ರದೇಶ), ಸೆ 15 (DaijiworldNews/DB): ರಸ್ತೆ ಮಧ್ಯದಲ್ಲಿಯೇ ನಮಾಜ್ ಮಾಡಿದ್ದ ಮುಸ್ಲಿಂ ಯಾತ್ರಾರ್ಥಿಗಳಿಂದ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಕ್ಷಮೆ ಯಾಚನೆ ಮಾಡಿಸಿದ ಘಟನೆ ಉತ್ತರಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ.
ಮುಸ್ಲಿಂ ಯಾತ್ರಾರ್ಥಿಗಳು ಪಶ್ಚಿಮ ಬಂಗಾಳದಿಂದ ರಾಜಸ್ಥಾನದ ಅಜ್ಮೀರ್ ಷರೀಫ್ ದರ್ಗಾಕ್ಕೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲವರು ದಾರಿ ಮಧ್ಯದಲ್ಲೇ ನಮಾಜ್ ಮಾಡಿದ್ದಾರೆ. ಹೀಗಾಗಿ ವಿಎಚ್ಪಿ ಕಾರ್ಯಕರ್ತರು ಕ್ಷಮೆ ಯಾಚನೆ ಮಾಡಿಸಿದ್ದಾರೆ ಎನ್ನಲಾಗಿದೆ. ಇನ್ನು ಕ್ಷಮೆ ಯಾಚನೆಯ ವೀಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಗುಂಪೊಂದು ಕ್ಷಮೆ ಯಾಚಿಸುತ್ತಿರುವುದು ಕಂಡು ಬಂದಿದೆ. ಅಲ್ಲದೆ ವಿಎಚ್ಪಿ ಕಾರ್ಯಕರ್ತರು ಕಿವಿ ಹಿಡಿದು ಕ್ಷಮೆ ಕೋರುವಂತೆ ಒತ್ತಾಯಿಸುತ್ತಿರುವುದೂ ವೀಡಿಯೋದಲ್ಲಿದೆ ಎನ್ನಲಾಗಿದೆ.
ಶಹಜಹಾನ್ಪುರದ ತಿಲ್ಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಕೆಲ ವ್ಯಕ್ತಿಗಳು ದಾರಿ ಮಧ್ಯದಲ್ಲಿಯೇ ನಮಾಜ್ ಮಾಡಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ (ಶಹಜಹಾನ್ಪುರ) ಎಸ್. ಆನಂದ್ ಹೇಳಿದ್ದಾರೆ.
ದಾರಿ ಮಧ್ಯೆ ನಮಾಜ್ ಮಾಡಿದ ಹದಿನೆಂಟು ಮಂದಿಯನ್ನು ದೂರಿನ ಮೇರೆಗೆ ಠಾಣೆಗೆ ಕರೆ ತಂದು ಬಳಿಕ ಬಿಡುಗಡೆ ಮಾಡಲಾಗಿದೆ. ಎಲ್ಲರೂ ಲಿಖಿತ ರೂಪದಲ್ಲಿ ಕ್ಷಮೆ ಯಾಚನೆ ಮಾಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ವಾಜಪೇಯಿ ತಿಳಿಸಿರುವುದಾಗಿ ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ ಬಹಿರಂಗ ನಮಾಜ್ ಮಾಡುವುದು ನಿಷಿದ್ಧವಾಗಿದೆ. ನಾನು ಕೆಲಸದ ನಿಮಿತ್ತ ರಸ್ತೆಯಲ್ಲಿ ತೆರಳುತ್ತಿದ್ದಾಗ ಕೆಲವರು ಬಹಿರಂಗವಾಗಿ ನಮಾಜ್ ಮಾಡುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಎಚ್ಚರಿಸಿ ಬಳಿಕ ದೂರು ನೀಡಿದ್ದೆ ಎಂದು ಸ್ಥಳೀಯ ವಿಎಚ್ಪಿ ಮುಖಂಡ ರಾಜೇಶ್ ಅವಸ್ತಿ ತಿಳಿಸಿದ್ದಾರೆ.